ಹುಬ್ಬಳ್ಳಿ ಸಿದ್ದಾರೂಢ ಮಠದ ರಥದ ಪ್ರತಿರೂಪವನ್ನು ಆರೂಢ ಮಠದ ರಥ ರಚನೆಯಾಗಿದೆ.
ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಶ್ರೀ ಆರೂಢ ಮಠದ ಸದಾಶಿವಾನಂದ ಸ್ವಾಮೀಜಿ 13ನೇ ಪುಣ್ಯಸ್ಮರಣೆ, ಮಹಾರಥದ ಲೋಕಾರ್ಪಣೆ ನಿಮಿತ್ತ ಫೆ.1ರಿಂದ 5ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಶಿವಪುತ್ರ ಮಹಾಸ್ವಾಮಿಗಳು ಮಾಹಿತಿ ನೀಡಿದರು.
ಮಂಗಳವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ‘ಸದಾಶಿವನಂದ ಶ್ರೀಗಳ ಸಂಕಲ್ಪದಂತೆ, ಹುಬ್ಬಳ್ಳಿ ಸಿದ್ಧಾರೂಢ ಮಠದ ರಥದ ಮಾದರಿಯಲ್ಲೇ 50 ಲಕ್ಷ ರೂ. ವೆಚ್ಛದಲ್ಲಿ 35 ಅಡಿ ಎತ್ತರದ ಮಹಾರಥ ನಿರ್ಮಿಸಲಾಗಿದೆ. ಆ ರಥದ ಮೇಲೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು, ನವಲಗುಂದ ಶ್ರೀ ನಾಗಲಿಂಗ ಸ್ವಾಮೀಜಿ ಸೇರಿ ಆರೂಢ ಪರಂಪರೆಯ ಸ್ವಾಮೀಜಿಗಳ ಚಿತ್ರವನ್ನು ಮೇಲೆ ಬಿಡಿಸಲಾಗಿದೆ. ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಕಾಶಿನಾಥ ಬಡಿಗೇರ ಅವರು ಬಹಳ ಸುಂದರವಾದ ರಥ ನಿರ್ಮಿಸಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಈ ಜಾತ್ರೆಯಲ್ಲಿ ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸೇರಿ 100ಕ್ಕೂ ಅಧಿಕ ನಾಡಿನ ಮಠಾಧೀಶರು, ಸೂಫಿ–ಸಂತರು ಹಾಗೂ 50 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವರು ಎಂದರು.
1ರಂದು ಬೆಳಿಗ್ಗೆ 10ಕ್ಕೆ ಅಂತರರಾಷ್ಟ್ರೀಯ ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್ ಅಖಿಲ ಕರ್ನಾಟಕ ವೇದಾಂತ ಪರಿಷತ್ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಯುವ ಸಮಾವೇಶ, ರಾಜ್ಯಮಟ್ಟದ ಮಹಿಳಾ ಸಮಾವೇಶ, ಶ್ರೀಗಳ ತುಲಾಭಾರ, ತೊಟ್ಟಿಲೋತ್ಸವ, ಶ್ರೀಗಳ ಕಿರೀಟ ಮಹಾಪೂಜೆ, ಸರ್ವಧರ್ಮ ಭಾವ್ಯಕ್ಯತೆ ಸಮ್ಮೇಳನ, ರೈತ ಸಮಾವೇಶ, ಆರೂಢಶ್ರೀ ಪ್ರಶಸ್ತಿ ಪ್ರದಾನ ಹಾಗೂ ಗಣ್ಯಮಾನ್ಯರು, ಸಾಧಕರು ಮತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. 4ರಂದು ಸಂಜೆ 5ಕ್ಕೆ ಮಹಾರಥೋತ್ಸವ, 5ರಂದು ಶ್ರೀಗಳ ಕವದಿ ಮಹಾಪೂಜೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಖ್ಯಾತ ಸಂಗೀತಗಾರ ನಂದಕುಮಾರ ದೊಡವಾಡ, ಬಿ. ಎನ್. ಬನೋಶಿ, ಚಂದ್ರು ಬೆಳಗಾವಿ ಉಪಸ್ಥಿತರಿದ್ದರು.