‘ವಿದ್ಯೆಯೊಂದಿಗೆ ಬುದ್ಧಿವಂತರಾಗಿ’ ಚಂದ್ರಶೇಖರ ವಡಗೇರಿ
ಗದಗ
ನರೇಗಲ್ಲ: ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು, ಬುದ್ದಿವಂತರಾಗಬೇಕು ಎಂದು ಶಿಕ್ಷಣ ತಜ್ಞ, ವಾಗ್ಮಿ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ವಡಗೇರಿ ಹೇಳಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಜಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಸನ್ 2022-23 ನೇ ಸಾಲಿನ ಸರಸ್ವತಿ ಪೂಜಾ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ವಿದ್ಯೆ ಸುಖದ ಸಾಧನವಾಗಬೇಕು, ಸಚ್ಚಾರಿತ್ರ್ಯ ಶಿಕ್ಷಣದ ಅಡಿಪಾಯವಾಗಬೇಕು , ಶಿಕ್ಷಣ ಜೀವನದ ತಳಪಾಯವಾಗಬೇಕು, ವ್ಯಕ್ತಿತ್ವ ವಿಕಸನವೇ ಸಮಾಜಕ್ಕೆ ಉತ್ತಮ ಕೊಡುಗೆಯಾಗಿರಬೇಕು ಎಂದರು.ಶಿಕ್ಷಕರು ಸಕಲ ಕಲಾ ವಲ್ಲಭವನಾಗಿರಬೇಕು, ಬರಿ ಪಾಠ ಬೋಧನೆ ಮಾಡುವುದು ಅಷ್ಟೇ ಅಲ್ಲ ಹಾಡಬೇಕು, ಕುಣಿಯಬೇಕು, ನಟಿಸಬೇಕು ಸರ್ವ ವಿದ್ಯೆಯೂ ಶಿಕ್ಷಕರಲ್ಲಿ ಇರಬೇಕು ಅಂದಾಗ ಮಾತ್ರ ಪಠ್ಯದಲ್ಲಿಯ ಕಠಿಣಾಂಶಗಳನ್ನು ಸರಳಿಕರಣಗೊಳಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಯಾವ ಮಗ ಹೆಚ್ಚು ಎದ್ದು ನಿಂತು ಪ್ರಶ್ನೆಕೇಳುತ್ತಾನೆ ಅವನು ಜಾಣನಾಗುತ್ತಾನೆ. ಅಸಾಧ್ಯ ಎನ್ನುವುದನ್ನು ಸಾಧ್ಯ ಎಂದು ತೋರಿಸಿದ ಹಲವು ಮಹಾನ್ ಸಾಧಕರನ್ನು ಇಲ್ಲಿ ನೆನಪಿಸಿದರು.
ಯಾರು ಸಾಧ್ಯ ಅಂತಾರೆ ಅವನೇ ಜಾಣ, ಯಾರು ಅಸಾಧ್ಯ ಅಂತಾರೆ ಅಂತವರು ಮೂರ್ಖರು.
ಗುರುಗಳು ಹೇಳಿದ ಪಾಠ ಚೆನ್ನಾಗಿ ಅರ್ಥಮಾಡಿಕೊಂಡು ಓದಬೇಕು, ಚೆನ್ನಾಗಿ ಬರೆಯಬೇಕು. ದೇವರಲ್ಲಿ ಶ್ರದ್ದೆ ಭಕ್ತಿ ಇರಬೇಕು. ತಂದೆ ತಾಯಿ ಗುರುಗಳನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಯಾವತ್ತೂ ಇವೆರಡನ್ನೂ ಮರೆಯಬಾರದು ಒಂದನ್ನು ಬಿಡಬೇಡ, ಎರಡನ್ನೂ ಮರೆಯಬೇಡ ಒಂದು ಸಿಂಹಾವಲೋಕನ, ಎರಡು ಆತ್ಮಾವಲೋಕನ ಇವೆರಡನ್ನು ಅಳವಡಿಸಿಕೊಳ್ಳಬೇಕು . ದೇವರು ಮತ್ತು ಕಾಯಕ ಮರೆಯಬೇಡಿ.
ನಿಮ್ಮ ಓದಿಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ವಿದ್ಯಾರ್ಥಿಗಳನ್ನು ಬೀಳ್ಕೊಟ್ಟು ಶುಭವನ್ನು ಹಾರೈಸಿ ಕೊನೆಗೆ ಜಾನಪ ಗೀತೆ, ಹಾಸ್ಯ, ವಿನೋದ, ವಿಡಂಬನೆ ಹಾಗೂ ಮಿಮಿಕ್ರಿಯನ್ನು ವೈವಿಧ್ಯಮಯವಾಗಿ ಪ್ರದರ್ಶಿಸುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಬಿ. ಆರ್. ಗದುಗಿನ ಪರೀಕ್ಷೆಗಳು ಹತ್ತಿರಕ್ಕೆ ಬರುತ್ತಿದ್ದಂತೆ ನಿಮ್ಮ ಓದುವಿಕೆ ಹೆಚ್ಚಾಗುತ್ತದೆ ಆದ್ದರಿಂದ ಈ ವೇಳೆಯಲ್ಲಿ ನೀವು ಓದಲು ಬಹಳಷ್ಟು ಕಷ್ಟಪಡುತ್ತೀರಿ.
ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಿದರೆ ನಿಮ್ಮ ಜ್ಞಾನವು ಹೆಚ್ಚುವುದರ ಜೊತೆಗೆ ಓದಿದ್ದೆಲ್ಲ ವಿಷಯ ನೆನಪಲ್ಲಿ ಉಳಿಯುತ್ತದೆ ಎಂದರು.
ಈ ವೇಳೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸಿ. ಎಂ. ವಡಗೇರಿಯವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಬಹುಮಾನಗಳನ್ನು ವಿತರಿಸಲಾಯಿತು.
ಹಲವಾರು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ವಿವಿಧ ಮನೋರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಂತಾರ ಚಿತ್ರದ ವರಾಹ ರೂಪಂ ಹಾಡು ಹೆಚ್ಚು ಗಮನ ಸೆಳೆಯಿತು.ಶಿಕ್ಷಕ ಟಿ. ಎನ್. ಬಾಕಳೆ ವಾರ್ಷಿಕ ವರದಿ ವಾಚಿಸಿದರು. ಹತ್ತನೇ ವರ್ಗ ಶಿಕ್ಷಕ ಸಿ. ವಿ. ಅಂಬಿಗೇರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಪಂ ಪಿಡಿಒ ಎಸ್. ಎಸ್. ರಿತ್ತಿ ಸೇರಿದಂತೆ ಸರ್ವ ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸರ್ವ ಸದಸ್ಯರು, ವಿದ್ಯಾರ್ಥಿ ಪಾಲಕ ಪ್ರತಿನಿಧಿಗಳು, ಪಾಲಕ ಪೋಷಕರು, ಊರಿನ ಪ್ರಮುಖರು, ಶಾಲಾ ಶಿಕ್ಷಕ/ಕಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಿಕ್ಷಕ ವಿ. ವಿ. ಅಣ್ಣಿಗೇರಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಯು, ಎಸ್. ಕಣವಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ಶ್ರೀಮತಿ ಡಿ. ಎಸ್. ಆಲಮೇಲ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಗೌರಮ್ಮ ವಂದಿಸಿದರು..