ಶಿಡ್ಲಘಟ್ಟ: ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ (ಪದವಿ ಪ್ರಧಾನ ಸಮಾರಂಭ) ಹಾಗೂ ಸ್ವಸ್ತಿ ಮಾತಾ ಪಿತೃ ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಶ್ರೀಶ್ರೀ ಮಂಗಳನಾಥ ಸ್ವಾಮೀಜಿ ರವರು ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು, ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ, ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸಮಾಜದಲ್ಲಿ ಮಕ್ಕಳು ಉತ್ತಮ ವ್ಯಕ್ತಿಗಳಾಗುತ್ತಾರೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಅಕ್ಷರಾಭ್ಯಾಸ ಮಾಡಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ನೀಡಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು.
ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಕ್ಷರ, ಮೌಲ್ಯಗಳನ್ನು ಕಲಿಸಬೇಕು. ಮನೆಯಲ್ಲಿ ದೂರದರ್ಶನ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪಟ್ಟುವರ ಮಟ್ಟಿಗೆ ಅದನ್ನು ನೋಡದಿರಲಿ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ರವರು ಮಾತನಾಡಿ, ತಾಯಿ ತಂದೆಗಿಂತ ಮಿಗಿಲಾದ ದೇವರಿಲ್ಲ, ಪ್ರತಿಯೊಬ್ಬ ಮಗುವೂ ತಾಯಿ ತಂದೆಯವರನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು. ಹಾಗೆಯೇ ಪೋಷಕರು ಸಹ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಹನೆಯನ್ನು ಕಲಿಸಬೇಕಾಗುತ್ತದೆ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಪುಠಾಣಿ ಮಕ್ಕಳು ಒಂದೊಂದು ಮಗು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ತಮ್ಮದೇ ದಾಟಿಯಲ್ಲಿ ಮುದ್ದು ಮಾತಿನಲ್ಲಿ ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲೆಗೆ ತಂದೆ ತಾಯಿಯನ್ನು ಕರೆ ತಂದಿದ್ದ ಪುಟಾಣಿ ಮಕ್ಕಳು ಅವರನ್ನು ಖುರ್ಚಿ ಮೇಲೆ ಕೂರಿಸಿ ತಾಯಿ ತಂದೆಯರ ಪಾದ ತೊಳೆದು ಹರಿಶಿನ, ಕುಂಕುಮ, ಇಟ್ಟು ಪುಷ್ಪ ಸಮರ್ಪಿಸಿ ನಮಸ್ಕರಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ನಿರೂಪಣೆ ಹಾಗು ಪದವಿ ಪ್ರಧಾನದ ಪ್ರತಿಜ್ಞಾ ಭೋದನೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿತ್ತು.
ನರ್ಸರಿ ವ್ಯಾಸಂಗ ಪೂರ್ಣಗೊಳಿಸಿದ ಯುಕೆಜಿ ಮಕ್ಕಳು ಸ್ವಾಮೀಜಿಯವರಿಂದ ಪದವಿ ಸ್ವೀಕರಿಸಿದರು. ಪುಟಾಣಿಗಳು ವಿವಿಧ ನೃತ್ಯ ಮಾಡುವುದರೊಂದಿಗೆ ಕಾರ್ಯಕ್ರಮದಲ್ಲಿದ್ದ ಪೋಷಕರು ಹಾಗು ಶಿಕ್ಷಕರ ಮನತಣಿಸಿದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕೆ.ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಮುಖಂಡರಾದ ದಿಬ್ಬೂರಹಳ್ಳಿ ಡಿ ಎಸ್ ಎನ್ ರಾಜು, ಡಾ.ಧನಂಜಯರೆಡ್ಡಿ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.