ಸ್ಮಶಾನ ಭೂಮಿ ಮಂಜೂರಾತಿಗೆ ಕ್ರಮ ; ಡಾ. ಬಿ.ಆರ್ ಅಂಬೇಡ್ಕರ ಭವನ ನಿರ್ಮಾಣಕ್ಕೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ : ಜಿಲ್ಲೆಯಲ್ಲಿ ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಿಗೆ ಕೂಡಲೇ ಭೂಮಿ ಮಂಜೂರು ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ.
ಈವರೆಗೆ ಮಂಜೂರಾದ ಸ್ಮಶಾನ ಭೂಮಿ ಅಭಿವೃದ್ಧಿಗೆ ಬಾಕಿಯಿರುವ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಮಾ.23) ನಡೆದ ಎಸ್.ಸಿ.ಪಿ/ಟಿ.ಎಸ್.ಪಿ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳವಡಿ ಗ್ರಾಮದ ಸ್ಮಶಾನ ಭೂಮಿ ಅಭಿವೃದ್ದಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ನರೇಗಾ ಯೋಜನೆ ಹಾಗೂ ಇಲಾಖೆಯ ಅನುದಾನ ಬಳಕೆ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಅದೇ ರೀತಿಯಲ್ಲಿ ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮದಲ್ಲಿ ಈಗಾಗಲೇ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ. ಹೆಚ್ಚುವರಿ ಬೇಡಿಕೆಯ ಅನುಗುಣವಾಗಿ ಇನ್ನೊಂದು ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ ಮತ್ತು ಅಭಿವೃದ್ದಿಗೆ ಅನುದಾನ ಕೂಡ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಳೆದ ಸಭೆಯ ತೀರ್ಮಾನದಂತೆ ಬೆಳವಡಿ ಗ್ರಾಮದಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲು ಸೂಚಿಸಲಾಗಿದೆ. ಸ್ಮಶಾನ ಭೂಮಿ ಇರದ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಲು ಸರ್ಕಾರದ ನಿರ್ದೇಶನವಿದೆ. ಪ್ರತಿ ಸಮಾಜಕ್ಕೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡಲು ಅವಕಾಶ ಇರುವುದಿಲ್ಲ.
ಸರಕಾರದ ವತಿಯಿಂದ ಒದಗಿಸಿರುವ ಸ್ಮಶಾನ ಭೂಮಿ ಎಲ್ಲರೂ ಬಳಕೆ ಮಾಡಲು ಅವಕಾಶವಿರುತ್ತದೆ. ಒಂದು ವೇಳೆ ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಸೂಚನೆ:
ಈ ವೇಳೆ ಮಾತನಾಡಿದ ನಾಮ ನಿರ್ದೇಶಕ ಸದಸ್ಯ ವಿಜಯ ತಳವಾರ ಅವರು ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಯೋಜನೆಯಡಿ ಫಲಾನುಭವಿಗಳಿಗೆ ಬಿಡುಗಡೆಯಾದ ಸಬ್ಸಿಡಿ ಹಣ ಬ್ಯಾಂಕ್ ನಲ್ಲಿ ಎಫ್.ಡಿ ಇಡುವ ಮೂಲಕ ಸಾಲ ಒದಗಿಸಲಾಗಿದೆ ಕೂಡಲೇ ಎಫ್.ಡಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬ್ಯಾಂಕ್ ಅಧಿಕಾರಿಗಳು ಸಾಲ ಸೌಲಭ್ಯಗಳ ಸಬ್ಸಿಡಿ ಹಣ ಎಫ್.ಡಿ ರೂಪದಲ್ಲಿ ಇರಿಸದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು
ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಹಂತದಲ್ಲಿದ್ದು, ಪ್ರಕರಣ ಇತ್ಯರ್ಥವಾಗಲಿದೆ ಎಂದು ತಿಳಿಸಿದರು.
ವಿವಿಧ ಸರಕಾರಿ ಸಹಾಯಧನ ಯೋಜನೆಯಡಿ ಆಯ್ಕೆಯಾಗುವ ಫಲಾನುಭವಿಗಳಿಗೆ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂಬ ಕಾರಣಕ್ಕೆ ಸಾಲ-ಸೌಲಭ್ಯ ನಿರಾಕರಿಸಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಆದ್ದರಿಂದ ಸಿಬಿಲ್ ಸ್ಕೋರ್ ಆಧರಿಸಿ ಸೌಲಭ್ಯ ನಿರಾಕರಿಸಬಾರದು ಎಂದು ಸಮಿತಿ ಸದಸ್ಯ ವಿಜಯ್ ತಳವಾರ ಸಭೆಯಲ್ಲಿ ಒತ್ತಾಯಿಸಿದರು.
ಚಿಕ್ಕೋಡಿ ತಾಲ್ಲೂಕಿನ ಬೋರಗಾಂವ ಪಟ್ಟಣದ ವೃತ್ತದ ಬಳಿ ಡಾ.ಅಂಬೇಡ್ಕರ್ ಉದ್ಯಾನ ನಿರ್ಮಾಣಕ್ಕೆ ಜಾಗೆ ಒದಗಿಸುವಂತೆ ಸದಸ್ಯರಾದ ಅಶೋಕ ಅಸೋದೆ ಅವರು ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಈ ಕುರಿತು ಬೋರಗಾಂವ ಪಟ್ಟಣ ಪಂಚಾಯತ ವತಿಯಿಂದ ತಹಶಿಲ್ದಾರ ಮೂಲಕ ಪ್ರಸ್ತಾವ ಬಂದ ಕೂಡಲೇ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಡಾ. ಬಿ.ಆರ್ ಅಂಬೇಡ್ಕರ ಭವನ ನಿರ್ಮಾಣಕ್ಕೆ ಕ್ರಮ:
ನಿಪ್ಪಾಣಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ ಅವರ ಭೇಟಿ ನೀಡಿದ ಜಾಗದಲ್ಲಿ ಭವನ ನಿರ್ಮಾಣಕ್ಕೆ 1 ಕೋಟಿ 37 ಲಕ್ಷ ಅನುದಾನ ಬಿಡುಗಡೆ ಮಾಡಿ, 10 ಎಕರೆ ಜಾಗ ಕೂಡ ಮಂಜೂರು ಮಾಡಲಾಗಿದೆ ಕೂಡಲೇ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಒಟ್ಟು ನಗರದಲ್ಲಿ 7 ಪ್ರಕರಣಗಳು ದಾಖಲಾಗಿದ್ದು, 7 ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಅದೇ ರೀತಿಯಲ್ಲಿ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳೆದ 3 ತಿಂಗಳಿಂದ 21 ಪ್ರಕರಣಗಳು ದಾಖಲಾಗಿದ್ದು, 1 ಪ್ರಕರಣ ಆರೋಪ ಪಟ್ಟಿ ಮಾಡಲಾಗಿದೆ ಹಾಗೂ 19 ಪ್ರಕರಣಗಳು ತನಿಖೆ ಹಂತದಲಿದ್ದು, 1 ಪ್ರಕರಣ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ವಿವರಿಸಿದರು.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ಥರ 26 ಪ್ರಕರಣಗಳಲ್ಲಿ 26.25 ಲಕ್ಷ ಪರಿಹಾರ ಧನ ವಿತರಿಸಲಾಗಿದೆ ಈಗಾಗಲೇ ವಿತರಿಸಲಾಗಿದೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ. ಕಲ್ಲೇಶ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಕುರಿಹುಲಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.