ಬಾಕಿಯಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು: ಈರಣ್ಣ ಕಡಾಡಿ ಸೂಚನೆ
ಬೆಳಗಾವಿ : ಜನಸಾಮಾನ್ಯರು, ವಿದ್ಯಾವಂತ ನಿರುದ್ಯೋಗಿಗಳು, ಮಹಿಳಾ ಸ್ವ-ಸಹಾಯ ಸಂಘಗಳು ಹಾಗೂ ಕೃಷಿಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳಿಗೆ ಸಂಬಂಧಿಸಿದಂತೆ ಬಾಕಿಯಿರುವ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಸೆ.02) ನಡೆದ ವಿವಿಧ ಬ್ಯಾಂಕ್ ಅಧಿಕಾರಿಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಸಮೀಕ್ಷೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರ ಮನೆಬಾಗಿಲಿಗೆ ಯೋಜನೆಗಳ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು.ಅರ್ಹರಿಗೆ ಸೌಲಭ್ಯ ನೀಡಲು ವಿಳಂಬ ಧೋರಣೆ ಬಿಟ್ಟು ಶೀಘ್ರ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು ಗ್ರಾಮಗಳಲ್ಲಿ ಹೊಸ ಬ್ಯಾಂಕ್ ಶಾಖೆ ತೆರೆಯುವ ಕುರಿತು ಸಾರ್ವಜನಿಕರಿಂದ ಮನವಿ ಬಂದಿದ್ದು, ಕೂಡಲೇ ಹೊಸ ಶಾಖೆಗಳ ಪ್ರಾರಂಭಕ್ಕೆ ಕ್ರಮ ವಹಿಸಲು ಸೂಚನೆ ನೀಡಿದರು.
10 ರೂಪಾಯಿ ನಾಣ್ಯಗಳು ಬೇರೆ ರಾಜ್ಯಗಳಲ್ಲಿ ಚಲಾವಣೆಯಲ್ಲಿದ್ದು, ಕರ್ನಾಟಕ ರಾಜ್ಯದಲ್ಲಿ ಚಲಾವಣೆ ತೊಂದರೆಯಾಗುತ್ತಿತುವುದರಿಂದ ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಬ್ಯಾಂಕ್ ಗಳ ಪಾತ್ರ ಮಹತ್ವದಾಗಿದೆ. ಹಾಗಾಗಿ ಬ್ಯಾಂಕ್ ಅಧಿಕಾರಿಗಳು ಸಭೆಗೆ ಸಂಬಂಧಿಸಿದ ದಾಖಲೆ ಹಾಗೂ ಮಾಹಿತಿಗಳನ್ನು ಕಡ್ಡಾಯವಾಗಿ ತರಬೇಕು. ಯಾವುದೇ ನೆಪ ಹೇಳದೆ ಹೊಸ ಶಾಖೆ ಪ್ರಾರಂಭಿಸುವ ಕುರಿತು ನಿಗದಿತ ಅವಧಿಯಲ್ಲಿ ಮಾಹಿತಿ ಸಲ್ಲಿಸಬೇಕು ಎಂದು ತಿಳಿಸಿದರು.
ಸ್ವ-ಉದ್ಯೋಗ ತರಬೇತಿ:
ಆರ್.ಸಿಟಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಈಗಾಗಲೇ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಬ್ಯೂಟಿ ಪಾರ್ಲರ್, ಮಹಿಳಾ ಹೊಲಿಗೆ ತರಬೇತಿ ಸೇರಿದಂತೆ ವಿವಿಧ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.
ಬೆಳಗಾವಿ ಲೋಕಸಭಾ ಸದಸ್ಯರಾದ ಮಂಗಳಾ ಅಂಗಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಬೋಯರ್ , ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ, ಆರ್ ಬಿ ಐ ಮ್ಯಾನೇಜರಾದ ಅಲೋಕ್ ಸಿಂಹ, ಕೆನರಾ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಕೆ.ಶಿವರಾಮಕೃಷ್ಣ ಹಾಗೂ ವಿವಿಧ ಬ್ಯಾಂಕ್ ಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.