*ದ. ರಾ. ಬೇಂದ್ರೆ ಅವರು ನೆನಪು ಕನ್ನಡಕ್ಕೆ, ಕನ್ನಡ ನಾಡಿಗೆ ಸದಾ* *ಚೇತೋಹಾರಿ- ನಾಡೋಜ ಡಾ. ಮಹೇಶ ಜೋಶಿ*
ಬೆಂಗಳೂರು : ಜಗದ ಕವಿ ಕುವೆಂಪು ಹಾಗೂ ವರಕವಿ ಬೇಂದ್ರೆ ಇವರಿಬ್ಬರು ಕನ್ನಡ ಸಾಹಿತ್ಯದ ಎರಡು ಕಣ್ಣುಗಳು. ಕನ್ನಡಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದ ಬೇಂದ್ರೆ ಅವರ ೧೨೭ನೇ ಜನ್ಮದಿನದಂದು ಅವರ ನೆನಪು ಮಾಡಿಕೊಳ್ಳುವದರ ಜೊತೆಗೆ ಯಾವುದೇ ಸಂದರ್ಭದಲ್ಲಿ ಮನಸ್ಸಿನಲ್ಲಿ ಯಾವುದೇ ತರಹದ ಬೇಸರವಾದಾಗ ನೆನಪಾಗುವುದೇ ಬೇಂದ್ರೆ ಅವರು ಬರೆದ ಸಾಹಿತ್ಯ. ಕಾರಣ ಅದರಲ್ಲಿ ಜೀವನದ ಎಲ್ಲಾ ಕಾಲಘಟ್ಟಗಳು ಅಡಕವಾಗಿದೆ. ಬೇಂದ್ರೆಯವರ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿ ಕೊಂಡ ನಾಡೋಜ. ಡಾ.ಮಹೇಶ ಜೋಶಿಯವರು ನಿತ್ಯವೂ ನೂತನವಾಗಿರುವ ಸಾಹಿತ್ಯವನ್ನು ನೀಡಿ ಹೋದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ನೆನಪು ಕನ್ನಡಕ್ಕೆ, ಕನ್ನಡ ನಾಡಿಗೆ ಸದಾ ಚೇತೋಹಾರಿ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಬಣ್ಣಿಸಿದರು.
*ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ವರಕವಿ ಡಾ. ದ.ರಾ.ಬೇಂದ್ರೆ ಅವರ ೧೨೭ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಇಳಿದು ಬಾ ತಾಯಿ ಇಳಿದು ಬಾ.. ಬೇಂದ್ರೆ ನಮನ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು*. ಕನ್ನಡದ ವರಕವಿ ಎಂದೇ ಖ್ಯಾತರಾಗಿರುವ ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ಅವರು ಜನ್ಮಜಾತ ಕವಿಯಾಗಿದ್ದರು. ಅವರ ಮಾತೇ ಕಾವ್ಯದಂತಿರುತ್ತಿತ್ತು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಬರೆದರು. ೧೯೧೮ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. ʻಗರಿʼ, ʻಕಾಮಕಸ್ತೂರಿʼ, ʻಸೂರ್ಯಪಾನʼ, ʻನಾದಲೀಲೆʼ, ʻನಾಕುತಂತಿʼ ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು ಎಂದು ನಾಡೋಜ ಡಾ. ಮಹೇಶ ಜೋಶಿ ನೆನಪಿಸಿಕೊಂಡರು.
೧೯೬೮ರಲ್ಲಿ ಭಾರತ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ, ೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ, ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಹೀಗೆ ಬೇಂದ್ರೆಯವರಿಗೆ ದೊರೆತ ಗೌರವಗಳು ಅಸಂಖ್ಯ. ಆದರೆ ಅದೇ ರೀತಿಯಲ್ಲಿ ಬಡತನವನ್ನು ಅನುಭವಿಸಿದ ಅವರ ಪ್ರತಿ ಮಾತುಗಳು ಮೇಲ್ನೊಟಕ್ಕೆ ಹಾಸ್ಯ ಎಂಬಂತೆ ಕಂಡರೂ ಪ್ರತಿ ಕ್ಷಣದಲ್ಲಿಯೂ ಜೀವನದ ಪಾಠವನ್ನು ಹೇಳುವಂತಿರುತ್ತಿದ್ದವು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ʻ*ಬೇಂದ್ರೆಯವರ ಸೃಜನ ಶೀಲತೆಯ ವಿಶಿಷ್ಠೆತೆಯʼ ಕುರಿತು ಬೆಂಗಳೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ನಿರ್ದೇಶಕರಾದ ಡಾ. ಬಸವರಾಜ ಕಲ್ಗುಡಿ ಅವರು* ಮಾತನಾಡಿದರು. ಕನ್ನಡಕ್ಕೆ ಸಾಹಿತ್ಯಕ ಹಾಗೂ ಸಂಸ್ಕೃತಿಯ ಜೀವಂತಿಕೆ ನೀಡಿದ ಅಪರೂಪದ ಕವಿ ಅವರು. ಬೇಂದ್ರೆ ಅವರು ಸಂಖ್ಯಾಶಾಸ್ತ್ರವನ್ನು ಇಟ್ಟುಕೊಂಡು ಕವನಗಳನ್ನು ಬರೆದರು. ಅವರು ಬರೆದ ನಾಲ್ಕುತಂತಿ ಎನ್ನುವ ಕವನದ ಆಂತ್ಯಂತಿಕ ಅರ್ಥವನ್ನು ಇನ್ನೂ ಸರಿಯಾಗಿ ವಿಮರ್ಶಕರು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ಬೇಂದ್ರೆಯವರು ಬರೆದ ಭಾವಗೀತೆಯಲ್ಲಿಯೂ ಓಂಕಾರ ಶಂಖನಾದಕಿಂತ ಕಿಂಚಿದೂನ ಎನ್ನುವಂತೆ ಹೇಳುತ್ತ ಬದುಕಿನ ಪರಮಾರ್ಥವನ್ನು ನೀಡಿದ್ದಾರೆ. ಬೇಂದ್ರೆ ಅವರ ಸಾಹಿತ್ಯದಲ್ಲಿ ವ್ಯಕ್ತಿ ವಿಶಿಷ್ಟತೆಗಳನ್ನು ಹುಡುಕಾಟದ ಬದಲು ಜೀವನ ಸೃಜನಶಿಲತೆ ಹುಡುಕಾಟ ದಾರಿಯಾಗಿತ್ತು. ಸಮರಸದ ರಸ ಭಾವವನ್ನು ಸಂಸ್ಕೃತಿಯೊಂದಿಗೆ ನಮ್ಮ ಭಾಷೆಗೆ ತಾಯ್ತನದ ಗುಣವಿದೆ ಎಂದು ಬಣ್ಣಿಸಿದರು.
*ಬೇಂದ್ರೆ ಕಾವ್ಯದಲ್ಲಿ ಒಲವು ಅಂತಃಕರಣ ಕುರಿತು ಹಿರಿಯ ಕವಿಯತ್ರಿ ಪ್ರೊ.ಎಂ.ಆರ್. ಕಮಲಾ* ಅವರು ಮಾತನಾಡಿ, ಬೇಂದ್ರೆಯವರು ಹೇಳಿದಂತೆ ಅಂತಃಕರಣ ಅಂದರೆ ಮೈ ಮ್ಯಾಲಿನ ಒಡವೆನೂ ಅಲ್ಲ, ವಸ್ತುವೂ ಅಲ್ಲ, ಅದು ಒಳಗಿನ ಇಂದ್ರಿಯ, ಅದು ತಾಯಿಗೆ ಮಾತ್ರ ಅರ್ಥವಾಗುವ ಪರಿ ಎಂದು ಬಣ್ಣಿಸುತ್ತಾರೆ. ಅವರು ಬರವಣಿಗೆಯಲ್ಲಿ ಅಂತಃಕರಣ ಇರುವದು ನಾವೆಲ್ಲಾ ಕಂಡಿದ್ದೇವೆ. ಆದರೆ ಅವರೊಳಗೆ ಇದ್ದ ಅಂತಃಕರಣದ ರೂಪವೆ ಅವರು ಬರೆದ ಕವನಗಳಲ್ಲಿ ತುಂಬು ತುಳುಕುವ ಭಾವ ಕಾಣುವುದಕ್ಕೆ ಸಾಧ್ಯವಾಗಿದೆ. ೨೦ನೇ ಶತಮಾನದಲ್ಲಿ ಗಂಡು ಹೆಣ್ಣನ್ನು ಸಮಾನ ನೆಲೆಯಲ್ಲಿ ನಿಲ್ಲಿಸಿ ಸಮಾನತೆಯನ್ನು ತರುವುದರಲ್ಲಿ ಅವರು ಬರೆದ ಕವನ ಅಂತಃಕರಣದ ಪ್ರತಿರೂಪ. ʻಬಿತ್ತಿದರೆ ಕಾಳು ಹನಿ ಹನಿಯಾಗಿ.. ತಾಯಿ ಬರ್ತಾಳ ತೆನಿ ತೆನಿಯಾಗಿʼ ಎಂದು ಹೇಳುವಾಗಲೂ ಬೇಂದ್ರೆಯವರಲ್ಲಿ ಪ್ರಕೃತಿಯ ಬಗ್ಗೆ ಅಡಗಿದ್ದ ಅಂತಃಕರಣ ಎದ್ದು ಕಾಣುತ್ತದೆ. ʻಒಲವುʼ ಎನ್ನುವ ಶಬ್ಧಕ್ಕೆ ಬೇಂದ್ರೆ ಅವರು ಸಾಕಷ್ಟು ಅರ್ಥವನ್ನು ಇಟ್ಟುಕೊಂಡು ತನ್ನ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದವ ಮಹಾನ್ ಅಂತಃಕರಣವಾದಿ ಎಂದು ಬಣ್ಣಿಸಿದರು.
*ಕಾರ್ಯಕ್ರಮದಲ್ಲಿ ಬೇಂದ್ರೆಯವರ ಕಾವ್ಯಗಳ ಗಾಯನವನ್ನು ಶ್ರೀಮತಿ ಸ್ಮಿತಾ ಕಾರ್ತಿಕ್ ಹಾಗೂ ಅವರ ಸಂಗಡಿಗರು ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಡಾ, ಪದ್ಮಿನಿ ನಾಗರಾಜು ಅವರು ವಂದಿಸಿದರು, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು*.