ಗುರುದೇವ ರಾನಡೆಯವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ
ಗುರುದೇವ ಡಾ.ಆರ್.ಡಿ.ರಾನಡೆ ಅವರ ಕೃತಿ ಲೋಕಾರ್ಪಣೆಯಲ್ಲಿ ಕಾಡಸಿದ್ದೇಶ್ವರ ಶ್ರೀ ಸಲಹೆ
ಬೆಳಗಾವಿ: ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದ್ದು, ವಿದೇಶಿಗರು ಸಹ ನಮ್ಮ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇಲ್ಲಿನ ಆಚಾರ-ಶ್ರೇಷ್ಠ ವಿಚಾರಗಳನ್ನು ಪರಿಚಯಿಸಿದ ಆಧುನಿಕ ಋಷಿ ಶ್ರೀ ಗುರುದೇವ ರಾನಡೆಯವರ ತತ್ವದಾರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಲ್ಲಾಪುರದ ಕನ್ಹೇರಿ ಸಿದ್ದಗಿರಿಮಠದ ಜಗದ್ಗುರು ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿನ ಹಿಂದವಾಡಿಯಲ್ಲಿನ ಅಕಾಡೆಮಿ ಆಫ್ ಕಂಪೇರಿಟಿವ ಫಿಲಾಸಫಿ ಆ್ಯಂಡ್ ರಿಲಿಜನ್ ನ ಗುರುದೇವ ರಾನಡೆ ಮಂದಿರದ ಸಭಾಂಗಣದಲ್ಲಿ ಶುಕ್ರವಾರ, ಗುರುದೇವ ಡಾ.ಆರ್.ಡಿ.ರಾನಡೆ ಅವರ ಆಂಗ್ಲಕೃತಿಯ ಕನ್ನಡ ಅನುವಾದದ ‘ಹಿಂದೀ ಸಂತ ಸಾಹಿತ್ಯದಲ್ಲಿ ಪರಮಾರ್ಥ ಮಾರ್ಗ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,
ಕೃತಿ ಬಿಡುಗಡೆಗೂ ಮುನ್ನ ಗುರುದೇವ ರಾನಡೆ ಅವರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವೀರ-ಶೂರ, ಭಕ್ತಿಪಂಥ ಹಾಗೂ ಶಾಸ್ತ್ರರನ್ನು ಜಗತ್ತಿಗೆ ನೀಡಿದ ದೇಶ ಭಾರತ, ನಮ್ಮಲ್ಲಿರುವ ಶಾಂತಿ, ಸಹಬಾಳ್ವೆ ಮತ್ಯಾವ ದೇಶದಲ್ಲೂ ಇಲ್ಲ. ಎಲ್ಲವನ್ನೂ ಶಾಲೆಗಳಲ್ಲಿ ಕಲಿಸಲು ಸಾಧ್ಯವಿಲ್ಲ. ಹಬ್ಬ ಹರಿದಿನಗಳಲ್ಲಿ ಪಾಲಿಸುವ ಆಚಾರ-ವಿಚಾರ, ಪದ್ದತಿ, ಮೂಲಕ ನಮ್ಮ ಪೂರ್ವಜರು ಸುಸಂಸ್ಕೃತ ಆಚರಣೆಗಳನ್ನು ಬುನಾದಿ ಹಾಕಿಕೊಟ್ಟಿರುವ ವ್ಯವಸ್ಥೆಯೇ ಎಲ್ಲವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಮಹಾ ತತ್ವಜ್ಞಾನಿ ಶ್ರೀ ಗುರುದೇವ ರಾನಡೆಯವರು ಆಚಾರ-ಶ್ರೇಷ್ಠವಿಚಾರಗಳನ್ನು ಕೃತಿಯಲ್ಲಿ ಅದ್ಬುತ ತಿಳಿಸಿದ್ದಾರೆ. ಇವರ, ಮಾರ್ಗದಲ್ಲಿ ಸಾಗಿದರೆ ಯುವಕ ಬಾಳು ಬೆಳಕಾಗುವುದು ಎಂದು ಆಶೀರ್ವದಿಸಿದರು.
ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಭಾರತೀಯತೆ ದಟ್ಟವಾಗಿದ್ದು, ಇಡೀ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಹಾಸುಹೊಕ್ಕಾಗಿದೆ. ಎಲ್ಲ ಜಾತಿಗಳಲ್ಲೂ ನಾಲ್ಕು ವರ್ಣಗಳಿವೆ. ವರ್ಣಗಳಲ್ಲಿ ಯಾವುದೇ ಜಾತಿ ಇಲ್ಲ ಎನ್ನುವುದನ್ನು ಅರಿತು ನಡೆದರೆ ಎಲ್ಲರೂ ನೆಮ್ಮದಿಯ ಬದುಕು ಸಾಗಿಸಬಹುದು ಎಂದರು.
ಆಫ್ರಿಕಾ ದೇಶ ವಜ್ರ, ಖನಿಜ ಸಂಪತ್ತು ನೀಡಿದೆ.
ಬುದ್ದಿವಂತಿಕೆ ಒಡೆದಾಳುವ ನೀತಿಗೆ ಲಂಡನ್. ತಂತ್ರಜ್ಞಾನದಲ್ಲಿ ಜಪಾನ್. ಜಗತ್ತಿನಲ್ಲಿ ಪೊಲೀಸಗಿರಿ ಮಾಡುವಲ್ಲಿ ಅಮೇರಿಕಾ ಖ್ಯಾತಿ ಪಡೆದಿದ್ದರೆ. ಭಾರತ ಮಾತ್ರ ಯಾವುದೇ ಧರ್ಮ ಭಾಷೆಗೆ ಸೇರಿದವರಾದರೂ ಸಹ ಒಂದೇ ತತ್ತ್ವಜ್ಞಾನವನ್ನು ಜಗತ್ತಿಗೆ ಪ್ರತಿಪಾದಿಸಿದ ರತ್ನಪ್ರಾಯ ಋಷಿಮುನಿ ಹಾಗೂ ಸಂತ ಶ್ರೇಷ್ಠರನ್ನು ನೀಡಿದೆ ಎಂದರು.
ಜಗತ್ತಿನ ಅಪರೂಪದ ಸಾಹಿತ್ಯ, ವ್ಯಕ್ತಿ, ತಂತ್ರಜ್ಞಾನ ಹಾಗೂ ದರ್ಶನಗಳನ್ನು ಜಗತ್ತಿಗೆ ನೀಡಿದ ದೇಶ. ಹತ್ತು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ದೇಶ ಭಾರತ. ದೇಶದ ಪ್ರತಿ ರಾಜ್ಯದಲ್ಲಿಯೂ ದೀರ, ಶೂರ, ಸಾಹಿತಿ, ದಾರ್ಶನಿಕರು, ಚಿಂತಕರ, ಶಾಸ್ತ್ರಗಳ ಜನಕ-ವಿಸ್ತಾರಕರನ್ನು ಕೊಟ್ಟಿದ್ದು, ಇಂದಿಗೂ ಈ ಪರಂಪರೆ ಮುಂದುವರಿದಿದೆ. ಜಗತ್ತಿನಲ್ಲಿ ನಡೆಯುವ ಪ್ರತಿ ಅಧ್ಬುತದಲ್ಲಿ ಭಾರತೀಯರು ಕೆಲವರಾದರೂ ಇದ್ದೇ ಇರುತ್ತಾರೆ. ಜಗತ್ತನ್ನು ಆಳುತ್ತೇವೆ ಎನ್ನುತ್ತಿದ್ದ ಬ್ರೀಟಿಷರನ್ನು ಇಂದು ಓರ್ವ ಭಾರತೀಯ ಆಳುತ್ತಿರುವುದು ನಮ್ಮ ಸಂಸ್ಕೃತಿ ಮಹತ್ವ ಸಾಬೀತುಪಡಿಸಿದಂತಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಎಂ.ಬಿ.ಝಿರಲಿ ಅವರು ಮಾತನಾಡಿ, ಜಗತ್ತಿನಲ್ಲಿ
ನಮ್ಮ ದೇಶದ ಮಹತ್ವದ ಕುರುಹು ತತ್ತ್ವಜ್ಞಾನವೇ ಆಗಿದೆ. ಅದರಲ್ಲೂ, ಗುರುದೇವ ರಾನಡೆ ಅವರು ಬರೆದ ರಾಮದಾಸರ ನಾಮಾಮೃತಗಳು ದೇಶ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಹೆಸರುವಾಸಿಯಾಗಿವೆ. ರಾಮದಾಸರಂತೆಯೇ ಇಂದು ನಮ್ಮೆಲ್ಲರ ನಡುವೆ ಮಹಾ ತತ್ತ್ವ ಜ್ಞಾನಿಯಾಗಿ ಕನ್ಹೇರಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಂದ ಇಡೀ ಜಗತ್ತಿಗೆ ಮಾರ್ಗದರ್ಶನ ದೊರೆಯುತ್ತಿರುವುದು ನಮೆಲ್ಲರ ಸೌಭಾಗ್ಯ. ಎಂದು ಹೇಳಿದರು.
ಸಿದ್ದೇಶ್ವರ ಸ್ವಾಮೀಜಿ ಅವರ ಆಶಯದಂತೆ ಗುರುದೇವ ರಾನಡೆ ಅವರ ಕೃತಿಯನ್ನು ಕನ್ನಡಕ್ಕೆ ಶೈಲಾ ಪಾಟೀಲ ಅವರು ಅನುವಾಧಿಸಿದ್ದಾರೆ. ಈ ಕೃತಿ ಮುನ್ನುಡಿಯನ್ನೂ ಸಿದ್ದೇಶ್ವರ ಸ್ವಾಮೀಜಿ ಬರೆದಿರುವುದು ಮತ್ತಷ್ಟು ಸಾರ್ಥಕತೆ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಅಶೋಕ ಪೋತದಾರ, ಶೈಲಾ ಮುತಾಲಿಕ್ ಪಾಟೀಲ, ಕಫಿಲೇಶ್ವರ, ಜಕಾತಿ, ಡಾ. ಗಿರೀಶ ಸೋನವಾಲ್ಕರ, ಮುರುಘೇಂದ್ರ ಪಾಟೀಲ ಹಾಗೂ ಶಾಲಾ ವಿದ್ಯಾರ್ಥಿಗಳು, ಸೇರಿದಂತೆ ಇತರರು ಇದ್ದರು. ಕಿಶೋರ್ ಕಾಕಡೆ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು.