ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿ
ಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಭೂಮಿಪೂಜೆ
ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಮೀಸಲಿರಿಸಿದ 100 ಕೋಟಿ ರೂ. ಪೈಕಿ ಮೊದಲ ಕಂತಿನಲ್ಲಿ 21.54 ಕೋಟಿ ರೂ ಅನುದಾನದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾರ್ಚ 14ರಂದು ಭೂಮಿಪೂಜೆ ನೆರವೇರಿಸಿದರು.
ಪೂರ್ವನಿಗದಿಯಂತೆ ಬೆಳಗ್ಗೆ ಬೆಂಗಳೂರಿನಿಂದ ವಾಯು ಮಾರ್ಗವಾಗಿ ಹೊರಟು ಗಿಣಿಗೇರಾ ವಾಯುನೆಲೆ ಮೂಲಕ ಅಂಜನಾದ್ರಿ ಹೆಲಿಪ್ಯಾಡಗೆ ಆಗಮಿಸಿದ ಮುಖ್ಯಮಂತ್ರಿಗಳು, ಅಲ್ಲಿಂದ ರಸ್ತೆ ಮಾರ್ಗವಾಗಿ ಹೊರಟು ಮೊದಲಿಗೆ ಆಂಜನೇಯ ಪಾದಕ್ಕೆ ಭೇಟಿ ನೀಡಿದರು.
ಆನೆಗೊಂದಿ ಹೆಲಿಪ್ಯಾಡದಿಂದ ಆಂಜನೇಯ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ಮೊದಲಿಗೆ ಪುರೋಹಿತರು ಮುಖ್ಯಮಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಬಳಿಕ ಆಂಜನೇಯ ಪಾದದ ಬಳಿಯಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಕಲ್ಯಾಣಾರ್ಥ ಪುರೋಹಿತರಾದ ಶ್ರೀ ಪಣಿರಾಮಚಂದ್ರ, ನಾಗರಾಜ ಭಟ್ಟ, ಕೀರ್ತಿನಾಥ ಭಟ್ಟ, ತಿರುಮಲ ಭಟ್ಟ ಅವರು ಪೂಜೆ ನೆರವೇರಿಸಿದರು.
ಬಳಿಕ ಬೆಟ್ಟದ ಪಕ್ಕದ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಜಿಲ್ಲಾಡಳಿತ ಇವರ ಸಹಯೋಗದಲ್ಲಿ ನಡೆದ ವೇದಿಕೆಯ ಸಮಾರಂಭದಲ್ಲಿ ಪ್ರವಾಸಿ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಣ ಪಥ, ಪ್ರದಕ್ಷಣ ತಂಗುದಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿತು.
ಪುರೋಹಿತರಾದ ರಮೇಶ ಆಚಾರ, ರಂಗನಾಥ ಭಟ್ಟ, ವಿದ್ಯಾಶಂಕರ ಅವರು ಭೂಮಿ ಪೂಜೆಯ ಕೈಂಕರ್ಯದಲ್ಲಿ ಭಾಗಿಯಾದರು.
ಸಚಿವರಾದ ಆನಂದ ಸಿಂಗ್, ಹಾಲಪ್ಪ ಬಸಪ್ಪ ಆಚಾರ್, ಮುನಿರತ್ನ, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಪಾಟೀಲ ಬಯ್ಯಾಪುರ, ಬಸವರಾಜ ಧಡೆಸಗೂರು, ಹೇಮಲತಾ ನಾಯಕ, ಕೊಪ್ಪಳ, ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು, ವೆಂಕಟೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಇತರರು ಇದ್ದರು.