ಪ್ರೌಢಶಾಲೆ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
ಬೆಳಗಾವಿ: “ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೈಗೊಂಡಿದ್ದು ಈ ಪೈಕಿ ಶೈಕ್ಷಣಿಕ ವ್ಯವಸ್ಥೆಗಳಲ್ಲೂ ಗಣನೀಯ ಸುಧಾರಣೆ ತಂದಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಜನತೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ಅವರ ಕೈ ಬಲಪಡಿಸಬೇಕು” ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (U) ಗ್ರಾಮದ ಬ್ರಹ್ಮಲಿಂಗ ಪ್ರೌಢಶಾಲೆಗೆ 2 ನೂತನ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ ಮಲೆನಾಡು ಅಭಿವೃದ್ಧಿ ಯೋಜನೆಯಡಿ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಸೇರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
“ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಕೇವಲ ರಸ್ತೆ, ಚರಂಡಿಗಳಿಗಷ್ಟೇ ಆದ್ಯತೆ ನೀಡದೆ, ಅಪಾರ ಪ್ರಮಾಣದ ಅನುದಾನ ತಂದು ಕ್ಷೇತ್ರದ ಅನೇಕ ಶಾಲಾ ಕೊಠಡಿಗಳನ್ನು ಸ್ಮಾರ್ಟ್ ಆಗಿಸಿದ್ದಾರೆ. ಅಲ್ಲದೆ ಹಲವು ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಕೊಠಡಿ, ಮತ್ತಿತರ ಮೂಲಸೌಲಭ್ಯಗಳನ್ನು ಒದಗಿಸಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ನಗರ ಪ್ರದೇಶದಲ್ಲಿ ಲಭ್ಯ ಸೌಕರ್ಯಗಳನ್ನು ಪಡೆದು ಶೈಕ್ಷಣಿಕ ಉನ್ನತಿ ಹೊಂದಲು ಸಾಧ್ಯವಾಗಿದೆ” ಎಂದು ಮೃಣಾಲ್ ಹೆಬ್ಬಾಳಕರ ಹೇಳಿದರು.
ಗ್ರಾಮದ ಹಿರಿಯರು, ಯಲ್ಲಪ್ಪ ಕಲಕಾಂಬ್ಕರ್, ಬಾಗಣ್ಣ ನರೋಟಿ, ಪರಶು ತೋರೆ, ದೇವಪ್ಪ ಪಾಟೀಲ, ಅಶೋಕ ಪಾಟೀಲ, ಪ್ರಕಾಶ ಪಾಟೀಲ, ಕೃಷ್ಣ ಪಾಟೀಲ, ರಾಮಚಂದ್ರ ಹುಲಜಿ ಹಾಗೂ ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.