ವರಿಷ್ಠರ ಬುಲಾವ್ ಹಿನ್ನೆಲೆ ಖಾನಾಪುರ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಪ್ರಮೋದ ಕೋಚೆರಿ ದಿಢೀರ್ ಬೆಂಗಳೂರಿಗೆ ದೌಡಾಯಿಸಿದ್ದು ತೀವ್ರ ಕುತೂಹಲ ಮೂಡಿಸಿದೆ.
ಹೌದು ಖಾನಾಪುರದಲ್ಲಿ ಬಿಜೆಪಿ ಟಿಕೆಟ್ ಗಾಗಿ 9 ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಎರ್ಪಟ್ಟಿದೆ. ಇದರಲ್ಲಿ ಪ್ರಮೋದ ಕೋಚೆರಿ ಹೆಸರು ಮುನ್ನೆಲೆಯಲ್ಲಿದ್ದು, ತಮಗೆ ಟಿಕೆಟ್ ನೀಡುವಂತೆ ಬಿಜೆಪಿ ಹಿರಿಯ ನಾಯಕರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೋಚೆರಿ ಮಾತುಕತೆ ನಡೆಸಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಖಾನಾಪುರದಲ್ಲಿ ಪಕ್ಷ ಕಟ್ಟಿ ಬೆಳೆಸಿರುವ ಕೋಚೆರಿ ಈ ಬಾರಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಪಕ್ಷ ನಿಷ್ಠ ಪ್ರಮೋದ ಕೋಚೆರಿಗೆ ಟಿಕೆಟ್ ನೀಡುವಂತೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ವರಿಷ್ಠರ ಮೇಲೆ ಒತ್ತಡ ಹೇರಿದ್ದು, ಅವರಿಗೆ ಟಿಕೆಟ್ ನೀಡಿದರೆ ಖಾನಾಪುರದಲ್ಲಿ ಮತ್ತೆ ಕಮಲ ಅರಳುವ ಸಾಧ್ಯತೆ ಇದೆ ಎಂದು ನಾಯಕರಿಗೆ ಮನದಟ್ಟು ಮಾಡಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಪ್ರಮೋದ ಕೋಚೆರಿ, ಕಾಂಗ್ರೆಸ್ ಶಾಸಕರಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ನಾನು ಕಳೆದ ಮೂವತ್ತು ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ, ಸಂಘ ಪರಿವಾರದಿಂದ ಬಂದಿದ್ದೇನೆ.
ತಳಮಟ್ಟದಿಂದ ಯಾರಿಗೆ ಟಿಕೆಟ್ ಸಿಕ್ಕರೆ ಒಳ್ಳೆಯದು ಎಂದು ಈಗಾಗಲೇ ಹೇಳಿದ್ದಾರೆ. ಕನ್ನಡ, ಮರಾಠಿ ಎರಡು ಭಾಷೆ ಸ್ಪಷ್ಟವಾಗಿ ಮಾತನಾಡುವ ನನಗೆ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕೆಂದು ಗೊತ್ತಿದೆ. ನನಗೆ ಟಿಕೆಟ್ ಸಿಕ್ಕು ನಾನು ಗೆದ್ದರೆ, ದಿನದ 24 ಗಂಟೆಯಲ್ಲಿ 18 ಗಂಟೆ ಜನರ ಸೇವೆ ಮಾಡಲು ಸಿದ್ಧನಿದ್ದೇನೆ. ನನಗೆ ಟಿಕೆಟ್ ಸಿಕ್ಕಿದ್ದೆ ಆದಲ್ಲಿ, ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರವಿಂದ ಪಾಟೀಲ ಪರ ಟಿಕೆಟ್ ನೀಡುವಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಲಾಬಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಯಿಸಿರುವ ಪ್ರಮೋದ ಕೋಚೆರಿ, ಯಾರೋ ಲಾಬಿ ಮಾಡಿ ಟಿಕೆಟ್ ಕೊಡಿಸುವ ಸಂಸ್ಕೃತಿ ನಮ್ಮ ಬಿಜೆಪಿ ಪಕ್ಷದಲ್ಲಿಲ್ಲ. ಪಕ್ಷ ನಿಷ್ಠೆ ನೋಡಿ ಟಿಕೆಟ್ ನೀಡುತ್ತಾರೆ ಎಂದರು.
ಒಟ್ಟಾರೆ ಭಾರಿ ಜಿದ್ದಾ ಜಿದ್ದಿನ ಕಣವಾಗಿರುವ ಖಾನಾಪುರ ಕ್ಷೇತ್ರದಲ್ಲಿ ಪ್ರಮೋದ ಕೋಚೆರಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದು, ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ