ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿ : ಎಮ್.ಆರ್.ಪಾಟೀಲ
ಹುಬ್ಬಳ್ಳಿ : ಒಂದೇ ಒಂದು ಬಾರಿ ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿ ಆರಿಸಿ ತನ್ನಿ, ಈ ಮೂಲಕ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲು ಅನುವು ಮಾಡಿಕೊಡಿ ಎಂದು ಕುಂದಗೋಳ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ತಿಳಿಸಿದರು.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲ್ ಸಹಕಾರದೊಂದಿಗೆ ಯಾವುದೇ ಅಧಿಕಾರವಿಲ್ಲದೇ ಕೋಟ್ಯಾಂತರ ರೂಪಾಯಿ ಅನುದಾನ ತಂದು ಗ್ರಾಮೀಣ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಕ್ಷೇತ್ರದ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಶ್ಯವಾದ ಅಂಗನವಾಡಿ, ಶಾಲೆ ಕೊಠಡಿ ನಿರ್ಮಾಣ, ಶಾಲೆಗಳಿಗೆ ಬಣ್ಣ ಹಚ್ಚುವ ಕಾರ್ಯ ಕೈಗೊಳ್ಳಲಾಗಿದ್ದು, ಇದೀಗ ಜನರು ಅಧಿಕಾರ ಕೊಟ್ಟಲ್ಲಿ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು.
ಈ ದಿಸೆಯಲ್ಲಿ ರಾಜ್ಯದಲ್ಲಿಯೇ ಹಿಂದೂಳಿದ ಕ್ಷೇತ್ರ ಎಂದು ಕರೆಸಿಕೊಳ್ಳಲು ಕುಂದಗೋಳ ಕ್ಷೇತ್ರವನ್ನು ಇತರ ಅಭಿವೃದ್ಧಿ ಕ್ಷೇತ್ರಗಳಂತೆ ಮಾದರಿ ಮಾಡಲು ಹಲವಾರು ಯೋಜನೆಗಳ ನೀಲನಕ್ಷೇ ಸಿದ್ದಪಡಿಸಲಾಗಿದೆ. ಅವುಗಳ ಸಾಕಾರಕ್ಕೆ ಜನರು ಬೆಂಬಲ ನೀಡಬೇಕು. ಈ ಬಾರಿ ಅಭಿವೃದ್ಧಿ ದೃಷ್ಟಿಯಿಂದ ಕ್ಷೇತ್ರದ ಮತದಾರರು ಮತ ನೀಡಬೇಕೆಂದು ಎಮ್.ಆರ್.ಪಾಟೀಲ್ ಮನವಿ ಮಾಡಿದ್ದಾರೆ.
ಬಾಕ್ಸ್
ಪತಿ ಪರವಾಗಿ ಭರ್ಜರಿ ಮತಯಾಚನೆ
ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರ ಪರವಾಗಿ ಅವರ ಪತ್ನಿ ಶಶಿಕಲಾ ಪಾಟೀಲ್ ಅವರು ವರೂರು ಗ್ರಾಮದಲ್ಲಿ ಮತಯಾಚನೆ ಮಾಡಿದರು. ಇದಕ್ಕೂ ಮುನ್ನ ಗ್ರಾಮದ ಮಹಿಳೆಯರು ಆರತಿ ಎತ್ತಿ ಶಶಿಕಲಾ ಪಾಟೀಲ್ ಅವರನ್ನು ಗ್ರಾಮಕ್ಕೆ ಸ್ವಾಗತಿಸಿದರು. ಬಳಿಕ ಮನೆ ಮನೆಗೆ ತೆರಳಿ ಭರ್ಜರಿ ಮತಯಾಚನೆ ಮಾಡಿದರು. ಈ ವೇಳೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಪತಿ ಹಾಗೂ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರನ್ನು ಬೆಂಬಲಿಸಲು ಕರೆಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ತೋಪನಗೌಡ್ರ, ಚಂದ್ರಪ್ಪ ಬೆಣ್ಣಿ, ಭಗವಂತ ವೆಂಕಣ್ಣವರ, ಮಹೇಶಗೌಡ ಪಾಟೀಲ, ಟಿ.ಜೆ.ಬಾಲಣ್ಣವರ, ದೇವೆಂದ್ರಪ್ಪ ಕಾಗೇನವರ, ಯಲ್ಲಮ್ಮ ಗಾಣಿಗೇರ್, ಬಸವರಾಜ ವಡ್ಡರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ