ಜಿಲ್ಲೆಯಲ್ಲಿ ಜೂ.9 ರಿಂದ ಅಂತರಾಷ್ಟ್ರೀಯ ಮಾಧ್ಯಮ ಸಮ್ಮೇಳನ
———————————————————————–
ಪತ್ರಕರ್ತರು ಹೆಚ್ಚಿನ ಮಟ್ಟದಲ್ಲಿ ಪಾಲ್ಗೊಳ್ಳಲು ದಿಲೀಪ್ ಕುರಂದವಾಡೆ ಕರೆ
ಬೆಳಗಾವಿ, ಮೇ.31(ಕರ್ನಾಟಕ ವಾರ್ತೆ): ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕುಂದಾನಗರಿ ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಜೂನ್.9 ರಿಂದ 11 ರವರೆಗೆ ನೆಹರು ನಗರದ ಕೆ.ಎಲ್.ಇ ಡಾ. ಹೆಚ್.ಬಿ ರಾಜಶೇಖರ ಸಭಾ ಭವನದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿಲೀಪ್ ಕುರಂದವಾಡೆ ಅವರು ತಿಳಿಸಿದರು.
ನಗರದ ಯುಕೆ-27 ಹೋಟೆಲ್ ನಲ್ಲಿ ಬುಧವಾರ ನಡೆದ (ಮೇ.31) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಆಯೋಜಿಸಲಾದ ಜೂನ್ 9 ರಿಂದ 11 ರವರಿಗೆ ನಡೆಯಲಿರುವ ಅಂತಾರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪತ್ರಕರ್ತರರು ಖ್ಯಾತ ಸಂಪಾದಕರು ಹಾಗೂ ಸಾಧಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಡಾ: ಭೀಮಶಿ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿ ಪ್ರಧಾನ ಸಂಪಾದಕರಾದ ಎಚ್.ಆರ್. ರಂಗನಾಥ, ವಿ.ಆರ್.ಎಲ್ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಆನಂದ ಸಂಕೇಶ್ವರ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಶ್ರೀಲಂಕಾ ದೇಶದ ಅಂತಾರಾಷ್ಟ್ರೀಯ ಖ್ಯಾತ ಕ್ರಿಕೆಟ್ ಪಟು ಸನತ್ ಜಯಸೂರ್ಯ, ಖ್ಯಾತ ಉದ್ಯಮಿ ಸಂಜಯ ಘೋಡಾವತ್, ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಭೋವೆಂಕಾ ಹರ್ಥ, ಶ್ರೀಲಂಕಾ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾದ ಛಲಕಾ ಗಜಬಾಹು ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಬಿ.ವಿ ಮಲ್ಲಿಕಾರ್ಜುನಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅದೇ ರೀತಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತರಾಷ್ಟ್ರೀಯ ಮಾಧ್ಯಮ ಸಮ್ಮೇಳನದಲ್ಲಿ ಪರಿಸರ ಹಾಗೂ ಮಾಧ್ಯಮ ಚಿಂತನಾಗೋಷ್ಟಿ ನಡೆಯಲಿದ್ದು, ದಕ್ಷಿಣ ಕೊರಿಯಾದ ಹಿರಿಯ ಪತ್ರಕರ್ತೆ ಗೀತಿಕಾ ತಾಲೂಕದಾರ, ಲಂಡನ್ ಹಿರಿಯ ಪತ್ರಕರ್ತರಾದ ಫಾತೂಮ್, ಶ್ರೀಲಂಕಾದ ಉಪುಲ್ ಜಯಸಿಂಘೆ, ಸೌಜ್ಞಾ ಪೌಡೆಲ್, ಡಾ. ಗೀತಾ ಕಿರಣ್, ಬಾಂಗ್ಲಾದೇಶದ ಮೊಹಮದ್ ಶಾಮೀಮ್ ಅವರು ಇರಲಿದ್ದಾರೆ ಎಂದು ಕುರಂದವಾಡೆ ಅವರು ತಿಳಿಸಿದರು.
ಜೂನ್ 9 ರಂದು ಅಂತರಾಷ್ಟ್ರೀಯ ಪತ್ರಕರ್ತರ ಆಗಮನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಜೂನ್ 10 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅತಿಥಿಗಳ ಭಾಷಣ ಹಾಗೂ ಮಧ್ಯಾಹ್ನ ಚಿಂತನಾಗೋಷ್ಠಿ ಕಾರ್ಯಕ್ರಮ ಅದೇ ರೀತಿಯಲ್ಲಿ ಜೂನ್ 11 ರಂದು ಅಂತಾರಾಷ್ಟ್ರೀಯ ಪತ್ರಕರ್ತರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ದಿಲೀಪ್ ಕುರಂದವಾಡೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಡಾ: ಭೀಮಶಿ ಜಾರಕಿಹೊಳಿ, ಹಿರಿಯ ಪತ್ರಕರ್ತರಾದ ನೌಶದ್ ಬಿಜಾಪುರ, ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
***