‘ಬದುಕಿನಲ್ಲಿ ಶಾಶ್ವತ ಮೌಲ್ಯಗಳನ್ನು ಅಳವಡಿಕೊಳ್ಳಬೇಕು’-ಸುರೇಶ ಕಬ್ಬೂರ
ಮೂಡಲಗಿ: ‘ಸತ್ಯ, ಅಹಿಂಸೆ, ಪ್ರಾಮಾಣಿಕತೆ ಇವು ಶಾಶ್ವತ ಮೌಲ್ಯಗಳಾಗಿದ್ದು ಮನುಷ್ಯ ಇವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವಿಕಾಸದತ್ತ ಸಾಗಲು ಸಾಧ್ಯ’ ಎಂದು ಸಾಯಿ ಸೇವಾ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲ್ಲೋಳಿಯ ಸುರೇಶ ಕಬ್ಬೂರ ಹೇಳಿದರು.
ಪಟ್ಟಣದ ಸತ್ಯ ಸಾಯಿ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯ ತನ್ನಲ್ಲಿರುವ ಸುಪ್ತವಾದ ದೈವತ್ವದ ಸಾಕ್ಷಾತ್ಕಾರ ಮಾಡಿಕೊಂಡು ಬದುಕಿನಲ್ಲಿ ಸಂತೃಪ್ತಿ ಪಡೆದುಕೊಳ್ಳಬೇಕು ಎಂದರು.
ಮನುಷ್ಯನಲ್ಲಿರುವ ಮನಸ್ಸು ಪ್ರಗತಿ, ಉದ್ದಾರಕ್ಕೂ ಕಾರಣವಾದರೆ ಹಾಗೆಯೇ ಆತನ ಅವನತಿಗೂ ಮನಸ್ಸು ಕಾರಣವಾಗಿದೆ. ಉತ್ತಮ ಆಚಾರ, ವಿಚಾರ, ಸತ್ಸಂಗದಲ್ಲಿ ತೊಡಗುವಂತ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳಬೇಕು. ಇಂದ್ರೀಯಗಳಿಗೆ ಮನಸ್ಸು ದಾಸವಾಗಬಾರದು ಎಂದರು.
ಪ್ರತಿಯೊಬ್ಬರು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಯ ಬದುಕನ್ನು ಬಯಸುವುದು ಸಹಜವಾದದ್ದು. ದೇವರಲ್ಲಿಡುವ ಭಕ್ತಿ, ಸೇವೆಯು ನಿಸ್ವಾರ್ಥವಾಗಿರಬೇಕು. ನಿಜವಾದ ಭಕ್ತಿ ಇದ್ದರೆ ನೀವು ಒಂದು ಹೆಜ್ಜೆ ಇಟ್ಟರೆ ದೇವರು ಎರಡು ಹೆಜ್ಜೆ ಇಟ್ಟು ನಿಮ್ಮ ಬಳಿಗೆ ಬರುವನು ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಭಜನೆ, ಪ್ರಾರ್ಥನೆ ಜರುಗಿತು. ಸಾಯಿ ಸೇವಾ ಸಮಿತಿಯ ಸೇವಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.