ಕನ್ನಡ ನೆಲದಲ್ಲಿ ಹುಟ್ಟಿರುವ ನಾವುಗಳು ಕನ್ನಡ ಭಾಷಾ ಪ್ರೇಮವನ್ನು ಮರೆಯಬಾರದು : ಮಾರುತಿ ಕಣಬರಗಿ
ಬೆಳಗಾವಿ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಮತ್ತು ಶ್ರೀ. ರೇಣುಕಾದೇವಿ ಸಮಾಜ ಸೇವಾ ಸಂಸ್ಥೆ ಬೆಳಗಾವಿ, ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 16 ರಂದು ಸಂಜೆ ೫.೦೦ ಘಂಟೆಗೆ ಶ್ರೀ. ಅಡವಿಸಿದ್ಧೇಶ್ವರ ಮಠ, ಹಳ್ಳದಕೇರಿ, ಹುಕ್ಕೇರಿ ತಾ:ಹುಕ್ಕೇರಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾರುತಿ ಕಣಬರಗಿ ಅವರು ಕನ್ನಡ ನೆಲದಲ್ಲಿ ಹುಟ್ಟಿರುವ ನಾವುಗಳು ಕನ್ನಡ ಭಾಷಾ ಪ್ರೇಮವನ್ನು ಮರೆಯಬಾರದು. ಕನ್ನಡ ಭಾಷೆ ನಮ್ಮ ಹೃದಯ, ಕನ್ನಡ ಭಾಷೆ ನಮ್ಮ ಬದುಕು ಆಗಬೇಕು. ಇಂದಿನ ಯುವಕರು ಕನ್ನಡ ನಾಡಿನ ಕಲೆ, ಸಂಸ್ಕೃತಿ ಪರಂಪರೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕೆಂದು ಯುವಕರಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಮೂಹ ನೃತ್ಯ, ಜಾನಪದ ಗೀತೆ, ಭಾವಗೀತೆ, ವಚನ ಗಾಯನ ನಾಡಗೀತೆ, ನಾಡಿನ ಹೆಸರಾಂತ ಕನ್ನಡ ಗೀತೆಗಳು, ಭರತ ನಾಟ್ಯ, ಕನ್ನಡ ಕಲೆ & ಸಂಸ್ಕೃತಿಗಳನ್ನು ಬಿಂಬಿಸುವ ಹಾಡುಗಳು, ಸೋಭಾನ ಪದಗಳು, ಭಜನಾ ಪದಗಳು, ಜಾನಪದ ಸಂಗೀತ, ಗೀಗೀ ಪದ, ಪೂಜಾ ಕುಣಿತ, ದಟ್ಟಿ ಕುಣಿತ, ಇನ್ನು ಮುಂತಾದ ನಾಡಿನ ಕಲೆಗಳನ್ನು ಪ್ರದರ್ಶನ ಮಾಡಲಾಯಿತು.
ಹಲವಾರು ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಸಹ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಭೀಮಪ್ಪಾ ಹುದ್ದಾರ, ಯಮನಪ್ಪಾ ಬಜಂತ್ರಿ, ರಾಜೇಶ್ವರಿ ಹಿರೇಮಠ, ಪ್ರತಿಭಾ ಕಳ್ಳಿಮಠ ಮತ್ತಿತ್ತರು ಉಪಸ್ಥಿತರಿದ್ದರು.