ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗುವುದು : ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ
ಬೆಳಗಾವಿ : ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ಕಾನೂನಿನಲ್ಲಿ ಅವಕಾಶ ಇಲ್ಲ. ಸರಕಾರದಲ್ಲಿ ನಿಯಮಾವಳಿಗಳಿಲ್ಲ. ಒಂದು ವೇಳೆ ನೀಡಿದರೆ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಹಾಕಲಾಗುವುದು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಸಚಿವ ಸ್ಥಾನಗಳಿಂದ ವಂಚಿತರಾಗಿ ಅತೃಪ್ತರಾಗಿರುವ ಶಾಸಕರನ್ನು ಸಮಾಧಾನ ಪಡಿಸುವ ಸಲುವಾಗಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ಸಚಿವ ಸಂಪುಟ ದರ್ಜೆ ಸ್ಥಾನ ಮಾನ ನೀಡುವುದನ್ನು ನಿಲ್ಲಿಸದೆ ಇದ್ದಲ್ಲಿ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಮೇತ ಪತ್ರ ಬರೆಯಲಾಗಿದೆ ಎಂದರು.
ಸಿಎಂ ವಿವೇಚಾನುಸಾರವಾಗಿ ಚಲಾಯಿಸುವ ಆದೇಶ ನಿರ್ಣಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಾಗಲಿ, ಸುತ್ತೋಲೆಗಳಾಗಲಿ ಶಿಷ್ಟಾಚಾರ ಇಲಾಖೆಯಲ್ಲಿ ಲಭ್ಯ ಇರುವುದಿಲ್ಲ ಎಂದು ಶಿಷ್ಟಾಚಾರ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಹಾಗೂ ಡಿಪಿಎಆರ್ ಅಧೀನದಲ್ಲಿ ಬರುವ ಶಾಖೆಗೂ ವರ್ಗಾಯಿಸಿದ್ದಾರೆ. ಇವರಿಂದಲೂ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಮಾಹಿತಿ ಲಭ್ಯವಾಗಿರುವುದಿಲ್ಲವೆಂಬ ದಾಖಲೆಗಳನ್ನು ಸರಕಾರಕ್ಕೆ ಪತ್ರದೊಂದಿಗೆ ನೀಡಲಾಗಿದೆ ಎಂದರು.