

ಬಿ.ಎಲ್.ಜಿ ಟ್ರಸ್ಟ್ ದಿಂದ ಶಿಕ್ಷಣ ಕ್ಷೇತ್ರಕ್ಕೆ ಶಾಸಕರ ಕೊಡುಗೆ ಅಪಾರ : ಹಣಮಂತ ಬೆಳಗಲಿ
_________________________________________
ತಳಕಟನಾಳ : ಸುಣದೋಳಿ ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ
ಗೋಕಾಕ : ತಳಕಟನಾಳ ಶಾಲೆಯು ಮದುವನಗಿತ್ತಿಯ ಹಾಗೆ ಕಂಗೋಳಿಸುತ್ತಿರಲು ಕಾರಣಿಕರ್ತರಾದವರು ನಮ್ಮ ಅರಬಾಂವಿ ಕ್ಷೇತ್ರದ ಶಾಸಕರು. ನಮ್ಮ ಭಾಗದಲ್ಲಿ ಅದರಲ್ಲಿ ಸುಣದೋಳಿ ಕ್ಲಸ್ಟರ್ ಗೆ ಅತಿಥಿ ಶಿಕ್ಷಕರನ್ನು ಹೆಚ್ಚಾಗಿ ನೀಡಿದ್ದಾರೆ, ಬಿ.ಎಲ್.ಜಿ ಟ್ರಸ್ಟ್ ದಿಂದ ಶಿಕ್ಷಣ ಕ್ಷೇತ್ರಕ್ಕೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅಪಾರ ಎಂದು ಹಣಮಂತ ಬೆಳಗಲಿ ಸುಣದೋಳಿ ಸಿ.ಆರ್.ಪಿ ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಕ್ರವಾರ(ಸೆ.6) ದಂದು ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸುಣದೋಳಿ ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2024-25 ನೇ ಸಾಲಿನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂದೆ ನಮ್ಮ ಶಾಲೆಗಳಿಗೆ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಟೆಕ್ನಿಕಲ್ ಯೋಜನೆಗಳು ಬರುತ್ತಿವೆ, ಆ ಯೋಜನೆಗಳಿಗೆ ಶಾಸಕರು ಸಹಕಾರ ಮಾಡಿದ್ದಾರೆ. ಒಟ್ಟಾರೆಯಾಗಿ ಅರಬಾಂವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅರಬಾಂವಿ ಶಾಸಕರು ಬಹಳಷ್ಟು ಸಹಾಯ-ಸಹಕಾರ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರತಿಭಾ ಕಾರಂಜಿಯ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಶಕ್ತಿಯನ್ನು ಹೊರಹಾಕುವ ಸರ್ಕಾರದ ಯೋಜನೆಯಾಗಿದೆ. ಪಠ್ಯ ವಸ್ತುಗಳಿಗೆ ಸಮೀಪವಾಗಿರುವ ಅಂಶಗಳನ್ನು ಒಳಗೊಂಡಿರುತ್ತದೆ, ಮಕ್ಕಳಿಗೆ ವ್ಯವಸ್ಥಿತವಾದ ಜ್ಞಾನದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿ, ಮಕ್ಕಳು ಯಾವ ರಂಗದಲ್ಲಿ ಹೆಚ್ಚು ಪ್ರವೀಣರಾಗಿದ್ದಾರೆ ಎನ್ನುವುದನ್ನು ಗುರುತಿಸಿಕೊಳ್ಳುವ ಒಂದು ಹಂತವಾಗಿದೆ ಎಂದರು.
ತಳಕಟನಾಳ ಶಾಲೆಯು 1919 ರಲ್ಲಿ ಸ್ಥಾಪನೆಗೊಂಡ ಶಾಲೆ, ಇದು ಹಿಂದಿನಿಂದಲೂ ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿರುವ ಶಾಲೆಯಾಗಿದೆ. ಪ್ರತಿ ವರ್ಷವು 18 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಮೂರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆ ಮಾಡಿರುವಂತಹ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ. ಜೊತೆಗೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಒಂದು ಮಾದರಿ ಶಾಲೆಯಾಗಿದೆ ಎಂದು ಹಣಮಂತ ಬೆಳಗಲಿ ಸುಣದೋಳಿ ಸಿ.ಆರ್.ಪಿ ಅವರು ಹೇಳಿದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ಎಂ.ಜಿ.ಮಾವಿನಗಿಡದ ಅವರು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಕೇವಲ ಪಾಠದಿಂದ ಸಾಧ್ಯವಿಲ್ಲ, ಪಾಠದ ಜೊತೆಗೆ ಕ್ರಿಡೆ, ನೃತ್ಯ, ಹಲವಾರು ಸಾಂಸ್ಕೃತಿಕ ಹವ್ಯಾಸಗಳು ಕಲೆಯಬೇಕಾಗುತ್ತದೆ, ಅಂದಾಗ ಮಾತ್ರ ಒಬ್ಬ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ವಿದ್ಯಾರ್ಥಿಯಲ್ಲಿ ಅಡಗಿರುವ ಕಲೆಯನ್ನು, ಅವರ ಸಾಮರ್ಥ್ಯವನ್ನು ಹೊರಹಾಕುವ, ಪ್ರದರ್ಶಿಸುವ ಒಂದು ವೇಧಿಕೆ ಈ ಪ್ರತಿಭಾ ಕಾರಂಜಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸುಣದೋಳಿ ಕ್ಲಸ್ಟರ್ ನಲ್ಲಿರುವ 22 ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಹಲವಾರು ವಿಶೇಷ ಬಂಗಿಗಳಲ್ಲಿ, ಹಲವಾರು ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, 300 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಸಂಗೀತ, ನೃತ್ಯ, ಭಾಷಣ, ನಾಟಕ, ಕವಾಲಿ, ವೀರ ಯೋಧರ ವೇಷಭೂಷಣಗಳಿಂದ ತಳಕಟನಾಳ ಗ್ರಾಮದಲ್ಲಿ ನಡೆದ ಪ್ರತಿಭಾ ಕಾರಂಜಿಗೆ ಜೀವ ಕಳೆಯನ್ನು ತುಂಬಿದ್ದರು. ಮಕ್ಕಳು ಸಂತೋಷದಿಂದ ಪ್ರತಿಭಾ ಕಾರಂಜಿಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
*ವಿಶೇಷ ಸನ್ಮಾನ*
ಸುಣದೋಳಿ ಕ್ಲಸ್ಟರ್ ನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ, ಕ್ಲಸ್ಟರ್ ದಿಂದ ಬೇರೆ ಕಡೆ ವರ್ಗಾವಣೆ ಹೊಂದಿದ ಶಿಕ್ಷಕರಿಗೆ ಹಾಗೂ ಬೇರೆ ಕಡೆಯಿಂದ ಸುಣದೋಳಿ ಕ್ಲಸ್ಟರ್ ಗೆ ವರ್ಗಾವಣೆಯಾಗಿ ಬಂದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಹಾಗೂ ತಳಕಟನಾಳ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಜಿಲ್ಲಾ ಮಟ್ಟದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮೀಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಲೋಕನ್ನವರ, ಸಂಘಟನಾ ಕಾರ್ಯದರ್ಶಿ ಬಿ.ಬಿ.ಕಿವಟೆ, ಸದಸ್ಯರಾದ ಮಾಲತೇಶ ಸಣ್ಣಕ್ಕಿ, ಎಸ್.ಎಂ.ದಬಾಡಿ, ಎಸ್.ಸಿ, ಎಸ್.ಟಿ ನೌಕರ ಸಂಘದ ಅಧ್ಯಕ್ಷ ವಿಠ್ಠಲ ಹುಲ್ಲಾರ, ಕರ್ನಾಟಕ ರಾಜ್ಯ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಅಜ್ಜಪ್ಪನ್ನವರ, ಚಿಕ್ಕೋಡಿ ಜಿ.ಪಿ.ಟಿ ಪದವಿದರ ಕ.ರಾ.ಪ್ರಾ.ಶಾಲಾ ನೌಕರ ಸಂಘ ಜಿಲ್ಲಾ ಅಧ್ಯಕ್ಷ ಗೋವಿಂದ ಸಣ್ಣಕ್ಕಿ, ಕ.ರಾ.ಪ್ರಾ.ಶಾಲಾ ದೈಹಿಕ ಶಿಕ್ಷಕರ ತಾಲೂಕಾ ಅಧ್ಯಕ್ಷ ಎಸ್.ಎಂ.ನಾಗನೂರ, ಕ.ರಾ.ಪ್ರೌ.ಶಾಲಾ ದೈಹಿಕ ಶಿಕ್ಷಕರ ತಾಲೂಕಾ ಅಧ್ಯಕ್ಷ ಎಂ.ಎಸ್.ಮುತ್ತೆನ್ನವರ ಹಾಗೂ ತಳಕಟನಾಳ ಗ್ರಾಮ ಪಂಚಾಯತಿ ಅಧ್ಯಕ್ಷ-ಸದಸ್ಯರು, ಊರ ಪ್ರಮುಖರು ಹಾಗೂ ಶಿಕ್ಷಣ ಪ್ರೇಮಿಗಳು ಮತ್ತು ಸುಣದೋಳಿ ಕ್ಲಸ್ಟರ್ ನ 22 ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.