ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ” ಹುಲಿಕುಂಟೆ ಶ್ರೀ” ಪ್ರಶಸ್ತಿ ಪ್ರಧಾನ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮ
ಬಳ್ಳಾರಿ : ದಾವಣಗೆರೆ ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಉಪನ್ಯಾಸಕರಾದ ಡಾ.ರಾಮಚಂದ್ರಪ್ಪ ಎಸ್. ಇವರ ಸುದೀರ್ಘ ಕಲಾ ಸೇವೆ ಗುರ್ತಿನಿ, ಬಳ್ಳಾರಿಯ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ(ರಿ), ದಿ.ಶ್ರೀ ಹುಲೆಪ್ಪನವರ ಖ್ಯಾತ ತೊಗಲುಗೊಂಬೆ ಕಲಾವಿದರು, ಇವರ ಸ್ಮರಣಾರ್ಥ 15 ನೇ ವಾರ್ಷಿಕೋತ್ಸವದ ಪ್ರಸಕ್ತ ಸಾಲಿನ ರಾಜ್ಯಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿಯನ್ನು ಶನಿವಾರ (ಪೆ.22) ನೀಡಿ ಗೌರವಿಸಲಾಯಿತು.
ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಾದ ತೊಗಲುಗೊಂಬೆ ಕಲಾ ಕೃತಿ ಪ್ರದರ್ಶನ, ಬಳ್ಳಾರಿಯ ಶ್ರೀ ಗುರು ಪುಟ್ಟರಾಜ್ ಸಂಗೀತ ಪಾಠಶಾಲೆ ಟ್ರಸ್ಟ್ ವತಿಯಿಂದ ವಚನ ಗಾಯನ ಮತ್ತು ಸುಗಮ ಸಂಗೀತ ಕಾರ್ಯಕ್ರಮ ಮತ್ತು ಬಳ್ಳಾರಿಯ ಶ್ರೀಮತಿ ಇಂದ್ರಾಣಿ ಮತ್ತು ತಂಡದಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು..
ಈ ಕಾರ್ಯಕ್ರಮವನ್ನು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್.ರುದ್ರೇಶ್ ಅವರು ಉದ್ಘಾಟಿಸಿದರು. ವೇಧಿಕೆಯ ಅಧ್ಯಕ್ಷತೆಯನ್ನು ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ.ಕೆ.ಆರ್.ದುರ್ಗಾದಾಸ್ ಅವರು ವಹಿಸಿದ್ದರು. ಘನ ಉಪಸ್ಥಿತಿಯನ್ನು ಬೆಂಗಳೂರು ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಮುಂಡ್ರಿಗಿ ನಾಗರಾಜ್ ಅವರು ವಹಿಸಿದ್ದರು.
ಬಳ್ಳಾರಿ ಉದ್ಯಮಿಗಳಾದ ಹರಗಿನಡೋಣಿ ಮಹಾರುದ್ರಗೌಡ, ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ್ ಮತ್ತು ಶ್ರೀ ಮೇಧ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ರಾಮ್ ಕಿರಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ಕಲಾ ಪ್ರಪಂಚದಲ್ಲಿ ತುಂಬಾ ವೈಶಿಷ್ಟ್ಯತೆಗಳಿಂದ ಕೂಡಿದ ಕಲೆಯ ಪ್ರಕಾರ ತೊಗಲುಗೊಂಬೆಯಾಟ ಪ್ರಮುಖ ಸ್ಥಾನ ಪಡೆದಿದೆ. ಒಂದು ಕಾಲದಲ್ಲಿ ಉಚ್ಛಾಯ ಸ್ಥಿತಿಯಲ್ಲಿ ಇದ್ದಂತಹ ಈ ಕಲಾ ಪ್ರಕಾರ ಇಂದು ಅಳಿವಿನಂಚಿನಲ್ಲಿ ಸಾಗುತ್ತಿರುವುದು ವಿಷಾದನೀಯ. ಇಂತಹ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರು ಅನೇಕರಿದ್ದಾರೆ. ಆ ನಿಟ್ಟಿನಲ್ಲಿ ಖ್ಯಾತ ತೊಗಲುಗೊಂಬೆ ಕಲಾವಿದರಾದ ದಿ| ಹುಲೆಪ್ಪನವರ ಚತುರ್ಥ ಸುಪುತ್ರನಾದ ಕೆ.ಹೊನ್ನೂರಸ್ವಾಮಿ ಇವರು 2009-10ರಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡವನ್ನು ಪ್ರಾರಂಭಿಸಿದರು.
ಅಂದಿನಿಂದ ಇಲ್ಲಿಯವರೆಗೂ ಬಳ್ಳಾರಿ ಜಿಲ್ಲೆ ಸೇರಿದಂತೆ ಸಮಸ್ತ ಕನ್ನಡ ನಾಡಿನಲ್ಲಿ ಅನೇಕ ಸಾಂಸ್ಕೃತಿಕ ಕಲಾವೇದಿಕೆಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾ ಬರುತ್ತಿದ್ದಾರೆ. ಇವರು ತೊಗಲುಗೊಂಬೆಯಾಟದಲ್ಲಿ ಅಳವಡಿಸಿಕೊಂಡಿರುವ ವೈವಿಧ್ಯತೆ, ಅವುಗಳೆಂದರೆ ಕೇವಲ ರಾಮಾಯಣ, ಮಹಾಭಾರತ ಕಥಾಪ್ರಸಂಗಗಳನ್ನು ಹೊರತುಪಡಿಸಿ ಉತ್ತಮ ಸಾಮಾಜಿಕ ಸಂದೇಶಗಳನ್ನು ಸಾರುವಂತಹ ಅರಿವು, ಜ್ಞಾನ, ತಿಳುವಳಿಕೆ, ಆರೋಗ್ಯ, ಶಿಕ್ಷಣ, ಪರಿಸರ ಪ್ರಜ್ಞೆ ಮುಂತಾದ ಸಾಮಾಜಿಕ ಕಳಕಳಿಯ ಅಂಶಗಳನ್ನು ಒಳಗೊಂಡಿರುವ ಕಥಾಪ್ರಸಂಗಗಳನ್ನು ತೊಗಲುಗೊಂಬೆಯಾಟಕ್ಕೆ ಅಳವಡಿಸಿ ಪ್ರದರ್ಶನಗಳನ್ನು ನೀಡಿರುತ್ತಾರೆ. ಮೈಸೂರು ದಸರಾ, ಲಕ್ಕುಂಡಿ ಉತ್ಸವ, ಹಂಪಿ ಉತ್ಸವ ಸೇರಿದಂತೆ ಹಲವಾರು ಉತ್ಸವಗಳಲ್ಲಿ ಇವರು ಪ್ರದರ್ಶನ ನೀಡಿರುತ್ತಾರೆ.
ವಿಶೇಷವಾಗಿ 2016ರಿಂದ ಸರ್ಕಾರದ ಪ್ರಮುಖ ಯೋಜನೆಗಳಾದ ಉದ್ಯೋಗಖಾತ್ರಿ, ಸ್ವಚ್ಛಭಾರತ ಮುಂತಾದವುಗಳನ್ನು ಜನರಿಗೆ ತಿಳಿಯಪಡಿಸುವುದರ ಸಲುವಾಗಿ 30 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳಲ್ಲಿ ತೊಗಲುಗೊಂಬೆ ಪ್ರದರ್ಶನಗಳನ್ನು ನೀಡಿರುತ್ತಾರೆ. ಈಗಾಗಲೇ ದಶಕಂಠ ರಾವಣ ಶಿವನ ಆತ್ಮಲಿಂಗ, ಶ್ರೀಕೃಷ್ಣದೇವರಾಯ, ಪುಣ್ಯಕೋಟಿ, ಬಸವಬೆಳೆ ಸೇರಿದಂತೆ ಹಲವಾರು ಪ್ರದರ್ಶನಗಳನ್ನು ನೀಡಿದ್ದು. ಇನ್ನೂ ಮುಂದಿನ ದಿನಗಳಲ್ಲಿ ಸಂತ ಶಿಶುನಾಳ ಷರೀಫ, ಬುದ್ಧ ದರ್ಶನ, ಕೆರೆಗೆಹಾರ, ಗಾಂಧಿಗೆ ಸಾವಿಲ್ಲ, ಏಕಲವ್ಯ ಸೇರಿದಂತೆ ಹಲವಾರು ರೂಪಕಗಳನ್ನು ನವನವೀನ ರೀತಿಯಲ್ಲಿ ಪ್ರದರ್ಶನ ನೀಡುವ ಪ್ರಯತ್ನದಲ್ಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರ ವತಿಯಿಂದ ಗುರುಶಿಷ್ಯ ಪರಂಪರೆಯಡಿಯಲ್ಲಿ ಹಲವಾರು ಯುವಕರಿಗೆ ತೊಗಲುಗೊಂಬೆ ತರಬೇತಿಯನ್ನೂ ಸಹ ನೀಡಿರುತ್ತಾರೆ.