ಸುಮಾರು 2250 ಕೋಟಿ ರೂ.ಗಳ ಕಾಮಗಾರಿಗೆ ಶಂಕುಸ್ಥಾಪನೆ, ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಎಂದು ಸಂಪೂರ್ಣ ಮಾಹಿತಿ ನೀಡಿದ ಕಾರಜೋಳ
*ಬೆಳಗಾವಿ* : ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. 190 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಬೆಳಗಾವಿ ರೇಲ್ವೆ ನಿಲ್ದಾಣ ಉದ್ಘಾಟನೆ, 922 ಕೋಟಿ ವೆಚ್ಚದಲ್ಲಿ ಬೆಳಗಾವಿ ಲೋಂಡಾ ಡಬಲ್ ಲೈನ್ ಕಾಮಗಾರಿ, ರೇಲ್ವೆ ಇಲಾಖೆಯ ಒಟ್ಟು 1022 ಕೋಟಿ ವೆಚ್ಚದ ಕಾಮಗಾರಿ, ಜಲಜೀವನ್ ಮಿಷನ್ 1030 ಕೋಟಿ, ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದಲ್ಲಿ 8 ಕೋಟಿ ರೈತರಿಗೆ 16 ಸಾವಿರ ಕೋಟಿ ಹಣ ಬೆಳಗಾವಿಯಿಂದಲೇ ಮೋದಿಯವರು ಬಿಡುಗಡೆ ಮಾಡಲಿದ್ದಾರೆ ಎಂದು ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಇಂದು ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಅದರಲ್ಲಿ ಬೆಳಗಾವಿ ಜಿಲ್ಲೆಯ 5,10,649 ರೈತರಿಗೆ 13ನೇ ಕಂತು 2000 ರೂ.ಯಂತೆ 102 ಕೋಟಿ ಬಿಡುಗಡೆ, ಜಲಜೀವನ್ ಮಿಷನ್ ಅಡಿ ಸುರಕ್ಷಿತ ಶುದ್ಧ ಕುಡಿಯುವ ನೀರು 7 ಲಕ್ಷ ಜನರಿಗೆ ಎರಡು ಹಂತದಲ್ಲಿ ಕೊಡುತ್ತೇವೆ, ಪ್ರಧಾನಿ ಕಾರ್ಯಕ್ರಮಕ್ಕೆ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವರಿದ್ದಾರೆ, ಸುಮಾರು 8 ಕಿಮೀ ರೋಡ್ ಶೋ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಳಗಾವಿ ಸಂಸದರಾದ ಮಂಗಳಾ ಅಂಗಡಿ ಹಾಗೂ ಬೆಳಗಾವಿ ಉತ್ತರದ ಶಾಸಕರಾದ ಅನೀಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ಬಿಜೆಪಿಯ ಹಲವು ನಾಯಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
* ಜಲಜೀವನ್ ಮಿಷನ್‌ನಡಿ ಪೈಪ್ ಲೈನ್ ಅಳವಡಿಸಿದ್ದರೂ ನೀರು ಬರದ ವಿಚಾರ* : ಬೋರ್‌ವೆಲ್ ಹಾಕಿದ ಕೆಲವೆಡೆ ಫೇಲ್ಯೂರ್ ಆಗಿದ್ದು ಅವುಗಳ ಪುನಶ್ಚೇತನ ಮಾಡ್ತೇವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಯಿಂದ ಜನ ಭಾಗಿ, ವ್ಯವಸ್ಥಿತವಾದ ಕಾರ್ಯಕ್ರಮಕ್ಕೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ.
*ಮಹದಾಯಿ ಯೋಜನೆ ಜಾರಿ* ಬಗ್ಗೆ ಆತಂಕ ಪಡಬೇಕಿಲ್ಲ. ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ.
ಮಹದಾಯಿ ಯೋಜನೆ ಡಿಪಿಆರ್ ಮೋದಿ ಸರ್ಕಾರ ಅನುಮೋದನೆ ಮಾಡಿಕೊಟ್ಟಿದೆ. ಅಂತಾರಾಜ್ಯ ನದಿಗಳ ನೀರು ನಿರ್ವಹಣೆ ಗೆ ಸಿಡಬ್ಲ್ಯೂಸಿ ಯಲ್ಲಿ ಸಮಿತಿ ಮಾಡ್ತಾರೆ. ಮೊನ್ನೆ ಸಚಿವ ಸಂಪುಟದಲ್ಲಿ ಮೋದಿಯವರು ಮಹದಾಯಿ ಯೋಜನೆಗೆ ಪ್ರಾಧಿಕಾರ ರಚನೆ ಮಾಡಿದ್ದಾರೆ. ಪ್ರಾಧಿಕಾರದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ದವರು ಇರ್ತಾರೆ. ನೀರಿನ ನಿರ್ವಹಣೆ ಯಾವ ರೀತಿ ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡ್ತಾರೆ ಎಂದರು.
ನಮಗೆ ಹಂಚಿಕೆ ಆಗಿರುವ 3.9 ಟಿಎಂಸಿ ನೀರು ಬಳಕೆಗೆ ಸಿದ್ಧತೆ. ಮಹದಾಯಿ ನ್ಯಾಯಾಧೀಕರಣದಲ್ಲಿ ಹಂಚಿಕೆಯಾದ ನೀರು ಬಳಸಿಕೊಳ್ಳುತ್ತೇವೆ. ಎಲ್ಲ ಆಯಾಮಗಳಲ್ಲಿ ಒಪ್ಪಿಗೆ ಪಡೆಯಲು ವ್ಯವಸ್ಥೆ ಮಾಡಿದ್ದೇವೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾವಾಗಿ ಅರಣ್ಯ ಇಲಾಖೆಗೆ ಜಮೀನು ನೀಡಲು ಅಥಣಿ ತಾಲೂಕಿನಲ್ಲಿ ಜಮೀನು ಗುರುತಿಸಿದ್ದೇವೆ ಎಂದು ಅವರು ಹೇಳಿದರು.