ಬೆಳಗಾವಿಯ ಆರ್.ಎಲ್ ಕಾನೂನು ಕಾಲೇಜಿನಲ್ಲಿ ಮಾರ್ಚ್ 8 ರಿಂದ 10ರವರೆಗೆ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ.
ಬೆಳಗಾವಿ: ನಗರದ ಕೆ.ಎಲ್.ಎಸ್ ಸೊಸೈಟಿಯ ರಾಜ ಲಖಮಗೌಡ ಕಾನೂನು ಮಹಾವಿದ್ಯಾಲಯ ಎಂ.ಕೆ ನಂಬಿಯಾರ್ ಸ್ಮರಣಾರ್ಥ 14ನೇ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯ ಕುರಿತ ಪತ್ರಿಕಾಗೋಷ್ಠಿ ಆದರ್ಶ ಪ್ಯಾಲೇಸನಲ್ಲಿ ಏರ್ಪಡಿಸಿದ್ದರು.
ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಕೆ.ಎಲ್.ಎಸ್ ಸೊಸೈಟಿಯ ಕಾರ್ಯದರ್ಶಿ ಶ್ರೀ.ವಿವೇಕ ಕುಲಕರ್ಣಿ ಹಾಗೂ ಶ್ರೀ.ಎಸ್ ವಿ ಗಣಾಚಾರಿ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯು ಮಾರ್ಚ್ 8 ರಂದು ಸಂಜೆ 5:30 ಗಂಟೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅನಿಲ ಕಟ್ಟಿ ಮುಖ್ಯ ಅತಿಥಿಗಳಾಗಿ ಮತ್ತು ವಿ. ಜಿ. ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಗುಜರಾತ್, ಉತ್ತರ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು, ಗೋವಾ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ 35 ತಂಡಗಳು ಹಾಗೂ ದೇಶದ 5 ರಾಷ್ಟ್ರೀಯ ಕಾನೂನು ಶಾಲೆಗಳು ಒಳಗೊಂಡಂತೆ ಒಟ್ಟು 40 ತಂಡಗಳು ಸ್ಪರ್ಧಿಸಲಿವೆ ಎಂದು ಮಾಹಿತಿ ನೀಡಿದರು.
ಸ್ಪರ್ಧೆಯ ಅಂತಿಮ ಸುತ್ತು ಮಾರ್ಚ್ 10 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇ. ಎಸ್ ಇಂದಿರೇಶ್ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಸ್ಪರ್ಧೆಯ ಬಹುಮಾನ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದ್ದು, ಉತ್ತಮ ವಾದಮಂಡಕ ಹಾಗೂ ವಾದ ಮಂಡಕಿ ತಲಾ 15,000/- ನಗದು ಹಾಗೂ ಟ್ರೋಫಿ ಪಡೆಯಲಿದ್ದು, ಉತ್ತಮ ಜ್ಞಾಪಕ ಪತ್ರ 15,000/- ನಗದು ಮತ್ತು ಟ್ರೋಫಿಯನ್ನು ಪಡೆಯಲಿದೆ. ಇನ್ನುಳಿದಂತೆ ರನ್ನರ್ ಅಪ್ ತಂಡ 30,000/- ನಗದಿನೊಂದಿಗೆ ಟ್ರೋಫಿ ಹಾಗೂ ವಿಜೇತ ತಂಡ 50,000/- ನಗದಿನೊಂದಿಗೆ ಟ್ರೋಪಿಯನ್ನು ಗೆಲ್ಲಲಿದೆ. ಹಾಗೂ ಪ್ರಶಸ್ತಿಗಳ ಒಟ್ಟು ನಗದು 1,35,000/- ಒಳಗೊಂಡಿದೆ ಎಂದು ಕೆ ಎಲ್, ಎಸ್ ಸೊಸೈಟಿಯ ಸದಸ್ಯ ಆರ್.ಎಸ್ ಮುತಾಲಿಕ್ ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿದ ಅವರು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇ. ಎಸ್ ಇಂದಿರೇಶ್ ಮಾರ್ಚ್ 10 ರ ಸಂಜೆ 4:00 ಕ್ಕೆ, ಕೆ. ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿಯೂ ಸಹ ಉಪಸ್ಥಿತರಿರುವರು. ಕೆ.ಎಲ್.ಎಸ್ ಸೊಸೈಟಿಯ ಅಧ್ಯಕ್ಷ ಶ್ರೀ ಅನಂತ ಮಂಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಹಾಗೂ ಆಡಳಿತ ಮಂಡಳಿ ಚೇರ್ಮನ್ ಶ್ರೀ. ಪಿ.ಎಸ್ ಸಾವಕಾರ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಶ್ರೀ. ವಿ.ಎಮ್ ದೇಶಪಾಂಡೆ, ಪ್ರಾಚಾರ್ಯ ಡಾ. ಎ.ಎಚ್ ಹವಾಲ್ದಾರ್, ಅಣುಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಅಶ್ವಿನಿ ಪರಬ್ ಉಪಸ್ಥಿತರಿದ್ದರು.