ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು, ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ
ದಾವಣಗೆರೆ: ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು ಉತ್ತಮ ಶಿಕ್ಷಣದಿಂದ ಹೊರತು ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ. ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಹೇಳಿದ್ದಾರೆ.
ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯಲ್ಲಿ ನಡೆದ 12 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಸುವುದರಿಂದ, ಶೈಕ್ಷಣಿಕ ನೀತಿಗಳನ್ನು ಬದಲಾಯಿಸುವುದರಿಂದ ಶೈಕ್ಷಣಿಕ ವಾತಾವರಣ ಬದಲಾಗುವುದಿಲ್ಲ.ಬದಲಾಗಿ ವಿವಿಗಳು ಉತ್ತಮ ಶಿಕ್ಷಣವನ್ನು ನೀಡುವುದರಿಂದ ಬದಲಾವಣೆಗಳು ಸಾಧ್ಯ . ವಿಶ್ವವಿದ್ಯಾನಿಲಯಗಳು ತಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ಶಿಕ್ಷಣ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ವಿಶ್ವ ವಿದ್ಯಾ ನಿಲಯಗಳ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ ಮಾಡಿಲು ರಚಿಸಿದ ಸಂಪುಟ ಉಪ ಸಮಿತಿಯು ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳೇನು ಮತ್ತು ಅವುಗಳಿಗೆ ಪರಿಹಾರವೇನು ಎನ್ನುವ ವರದಿ ಬಂದ ಕೂಡಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಕೂಡಲೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ವಿವಿ ಗಳಲ್ಲಿ ಒಟ್ಟು 4800 ಕ್ಕೂ ಹೆಚ್ಚು ಅನುಮೋದಿತ ಬೋಧಕ ಹುದ್ದೆಗಳಿದ್ದು ಸುಮಾರು 3500 ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಆದ್ಯತೆ ನೀಡಲಾಗುವುದು. ಹಾಗೂ ನೇಮಕಾತಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಮೂಲಾಗ್ರ ಬದಲಾವಣೆ ತರುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಸಿಬ್ಬಂದಿ ಕೊರತೆ ಸೇರಿದತೆ ಉನ್ನತ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿ ಶೈಕ್ಷಣಿಕ ಗುಣಮಟ್ಟ ವನ್ನು ಕಾಪಾಡಿಕೊಳ್ಳುವುದಕ್ಕೆ ಸೌಲಭ್ಯ ಒದಗಿಸಲು ನಮ್ಮ ಸರ್ಕಾರವು ಬದ್ಧವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪ್ರಯತ್ನ ಪಡಬೇಕಿದೆ ಎಂದು ಹೇಳಿದರು.