ಬೆಂಗಳೂರು: ಯಲಹಂಕ ಕ್ಷೇತ್ರ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ, ಒಗ್ಗಟ್ಟು ಮತ್ತು ಒಮ್ಮತದಿಂದ ಚುನಾವಣೆಯನ್ನು ಎದುರಿಸಲಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಕೇಶವರಾಜಣ್ಣ ತಿಳಿಸಿದ್ದಾರೆ.
ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ‘ನಾವೆಲ್ಲ ಒಂದು ಕುಟುಬಂದ ಸದಸ್ಯರಂತೆ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಆಡತದಲ್ಲಿ ಯಲಹಂಕ ಕ್ಷೇತ್ತದ ಜನತೆ ಒಂದು ರೀತಿಯ ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ದೌರ್ಜನ್ಯ ಹೆಚ್ಚಾಗಿದೆ ಆದರೆ ಯಾವ ಜನರೂ ಸಹ ಭಯಪಡುವ ಅಗತ್ಯವಿಲ್ಲ. ಈ ಬಾರಿ ಚುನಾವಣೆಯಲ್ಲಿ ಇಂತಹ ದೌರ್ಜನ್ಯ ಎಸಗುವವರಿಗೆ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬೆಂ. ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಕುಮಾರ್ ಮಾತನಾಡಿ ‘ಯಲಹಂಕ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಚುನಾವಣೆಯ ಉದ್ದೇಶಕ್ಕಾಗಿ ಇಂದು ಇಲ್ಲಿಗೆ ಬಂದಿಲ್ಲ, ಅವರು ಹಲವು ವರ್ಷಗಳಿಂದ ಯಲಹಂಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರ ಸೇವೆಯನ್ನು ಗುರುತಿಸಿ, ಇದೀಗ ಪಕ್ಷ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಕಾಂಗ್ರೆಸ್ ನಾಯಕರು ಒಮ್ಮತದಿಂದ ಸಹಕರಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯದ್ದು 40% ಕಮಿಷನ್ ಸರ್ಕಾರ, ಬಿಜೆಪಿ ನಾಯಕರು ರಾಜ್ಯದಲ್ಲಿ ಎಸಗಿರುವ ಭ್ರಷ್ಟಾಚಾರ ಎಲ್ಲೆ ಮೀರಿದ್ದು ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಜಿ.ಜಯರಾಮಯ್ಯ, ಶ್ರೀಧರ್, ನಾಗೇನಹಳ್ಳಿ ಶ್ರೀನಿವಾಸ್, ಜಿ.ಪಂ.ಮಾಜಿ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ, ಕೆಪಿಸಿಸಿ ವಕ್ತಾರ ಮಂಜುನಾಥ ಅದ್ದೆ, ನಾಗರಾಜ್ ಗೌಡ ಕೋಗಿಲು ವೆಂಕಟೇಶ್, ಗೋಪಿನಾಥ್ ಗೌಡ, ಶಶಿಕುಮಾರ್, ತಿಮ್ಮರಾಜು, ಶಾರದ ಯುವ ಕಾಂಗ್ರೆಸ್ ನ ಮಾರುತಿ ಸೇರಿದಂತೆ ಇನ್ನಿತರರಿದ್ದರು.