ಬಳ್ಳಾರಿ ನಗರ; ಜೆಡಿಎಸ್ ಅಭ್ಯರ್ಥಿಯಾಗಿ ಮುನ್ನಾಭಾಯ್
ಬಳ್ಳಾರಿ ನಗರ ಕ್ಷೇತ್ರಕ್ಕೆ ಜೆಡಿಎಸ್ ವತಿಯಿಂದ ಮುನ್ನಾಭಾಯ್ ಅವರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಹೇಳಿದರು.
ಬಳ್ಳಾರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ರಾಜು ನಾಯಕ ಅವರು ಕಂಪ್ಲಿ ಕ್ಷೇತ್ರದ ಅಭ್ಯರ್ಥಿ ಎಂದು ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಲಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸೇರ್ಪಡೆ ಕಾರ್ಯ ನಡೆಯಲಿದೆ. ಕಾರ್ಯಕರ್ತರು, ಮುಖಂಡರು ಒಳಗೊಂಡಂತೆ ಸಾವಿರಾರು ಜನರು ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ರಾಜು ನಾಯಕ ಅವರ ಸ್ಪರ್ಧೆಯಿಂದಾಗಿ ಕಂಪ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಆಗಲಿದೆ ಎಂದು ಹೇಳಿದ ತಾಯಣ್ಣ, ಮುನ್ನಾಭಾಯಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಈಗಾಗಲೇ ಕೆಲವು ಪಕ್ಷದವರು ಕುಕ್ಕರ್ ಹಾಗೂ ಸೀರೆ ಹಂಚಿದ್ದಾರೆ. ಆದರೆ ಜೆಡಿಎಸ್ ಪಂಚ ರತ್ನ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ಕೊಟ್ಟ ಮಾತು ಮರೆಯುವವರಲ್ಲ, ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಸಹಕಾರ ನೀಡದಿದ್ದರೂ ಕೊಟ್ಟ ಮಾತಿಗೆ ಬದ್ಧರಾಗಿರಬೇಕೆಂದು ಸಾಲ ಮನ್ನಾ ಮಾಡಿದರು ಎಂದು ಅವರು ಹೇಳಿದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿ ಘೋಷಣೆ ಮಾಡಲಾಗುವುದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ಒಬ್ಬರು ಆಕಾಂಕ್ಷಿ ಇದ್ದಾರೆ, ಹರಪನಹಳ್ಳಿಯಲ್ಲಿ ಮಾಜಿ ಸಚಿವ ನಬಿಯವರ ಪುತ್ರ ಕೆಲಸ ಮಾಡುತ್ತಿದ್ದಾರೆ. ಹೊಸಪೇಟೆಗೆ ಹಲವು ಜನ ಆಕಾಂಕ್ಷಿಗಳಿದ್ದಾರೆ. ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಜೋಳದರಾಶಿ ತಿಮ್ಮಪ್ಪ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿ ಬಂದರೆ ಸ್ವಾಗತ, ಬೇರೆಯವರು ಬಂದರೂ ಕೂಡ ಸ್ವಾಗತ ಎಂದು ಹೇಳಿದ ತಾಯಣ್ಣ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದರು.
ಜಿಲ್ಲಾಧ್ಯಕ್ಷ ಸೋಮಲಿಂಗನಗೌಡ, ಕಪ್ಪಗಲ್ ರಸೂಲ್ ಸಬ್ ಯುವ ಮುಖಂಡ ವಿಜಯಕುಮಾರ್, ಅಭ್ಯರ್ಥಿ ಮುನ್ನಾಭಾಯ್ ತಿಮಪ್ಪ ಶಾಶವಲಿ ಪೂಲ್ ನೂರ್ ಸೇರಿದಂತೆ ಹಲವರು ಹಾಜರಿದ್ದರು.